ಸದ್ಯ ಗಾಂಧಿನಗರದಲ್ಲಿ ಶ್ರೀಮುರಳಿ ಅಭಿನಯದ ‘ಭರಾಟೆ’ಯ ಸೌಂಡ್ ಜೋರಾಗಿದ್ದು, ಕಳೆದ ಹದಿನೈದು ದಿನಗಳಿಂದ ಸಾಂಗ್ ಮೂಲಕ ನಿರೀಕ್ಷೆ ಮೂಡಿಸುತ್ತಿದ್ದ ಭರಾಟೆ ಇದೀಗ ಆ್ಯಕ್ಷನ್ ಟ್ರೇಲರ್ ಮೂಲಕ ಭರವಸೆಯನ್ನು ದುಪ್ಪಟ್ಟು ಗೊಳಿಸಿದೆ.
ಹೌದು ಮೊನ್ನೆಯಷ್ಟೇ ಈ ಚಿತ್ರದ ಆ್ಯಕ್ಷನ್ ಟ್ರೇಲರನ್ನು ಸ್ಯಾಂಡಲ್‍ವುಡ್‍ನ ನಿರ್ಮಾಪಕರು, ನಿರ್ದೇಶಕರು, ನಟರುಗಳು ಸೇರಿ ರಿಲೀಸ್ ಮಾಡಿದ್ದಾರೆ. ಈ ಟ್ರೇಲರ್‍ಗೆ ಅಂತರ್ಜಾಲದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರಿಲೀಸ್ ಆದ ಒಂದು ಗಂಟೆಯಲ್ಲಿ ಒಂದು ಮಿಲಿಯನ್‍ಗೂ ಹೆಚ್ಚು ವೀಕ್ಷಣೆಯನ್ನು ಪಡೆದು ಟ್ರೆಂಡ್ ಕ್ರಿಯೆಟ್ ಮಾಡಿದೆ. ಈ ಚಿತ್ರವನ್ನು ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಸುಪ್ರೀತ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸೆಟ್ಟೇರಿದಾಗಿನಿಂದ ಕುತೂಹಲ ಮೂಡಿಸುತ್ತಲೇ ಬರುತ್ತಿದೆ. ಚಿತ್ರದ ಶೂಟಿಂಗ್ ಶುರುವಾಗಿದ್ದೇ ರಾಜಸ್ಥಾನದಲ್ಲಿ. ಅಲ್ಲಿನ ಹೊಸ ಲೊಕೇಷನ್‍ಗಳು, ನಾಯಕ ನಟನ ಕಲರ್‍ಫುಲ್ ಕಾಸ್ಟ್ಯೂಮ್‍ಗಳು ಈಗಾಗಲೇ ಟೀಸರ್‍ನಲ್ಲಿ ಕಣ್ಣು ಕುಕ್ಕಿವೆ. ಅಲ್ಲದೇ ಹೀರೋ ಇಂಟ್ರೊಡಕ್ಷನ್ ಗೀತೆಯನ್ನು ಚಿತ್ರತಂಡ ಅಲ್ಲಿಯೇ ಚಿತ್ರಿಸಿತ್ತು. ಮೊನ್ನೆಯಷ್ಟೇ ಈ ಹಾಡು ರಿಲೀಸ್ ಆಗಿದೆ. ‘ರೋರಿಸಂ …’ ಎಂಬ ಈ ಗೀತೆಯನ್ನು ಚೇತನ್ ಕುಮಾರ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಮೊದಲೇ ಭರಾಟೆಯ ಎರಡು ಹಾಡುಗಳನ್ನು ತಂಡ ರಿಲೀಸ್ ಮಾಡಿತ್ತು. ಅವುಗಳಿಗೂ ಅಂತರ್ಜಾಲದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಶ್ರೀಮುರಳಿಯ ರೋರಿಸಂ ಜೋತೆಗೆ ಆ್ಯಕ್ಷನ್ ಟ್ರೇಲರ್ ಟ್ರೆಂಡ್ ಹುಟ್ಟುಹಾಕಿದೆ.
‘ಹೀ ಈಸ ಎ ಗೈಡೋ, ರಾಜಸ್ಥಾನ್ ಪೈಡೋ …’ ಎಂಬ ಸಾಲುಗಳ ಈ ರೋರಿಸಂ ಗೀತೆಯನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ದೃಶ್ಯದಲ್ಲಿ ಗಿರಿ, ಅಲೋಕ್ ಹಾಡುವ ಗೀತೆಗೆ ನಾಯಕ ಮುರಳಿ ವಿಭಿನ್ನ ಲುಕ್, ಕಾಸ್ಟ್ಯೂಮ್‍ನಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಗೀತೆಯನ್ನು ನಿರ್ದೇಶಕರಾದ ತರುಣ್ ಸುದೀರ್, ಮಹೇಶ್ ಕುಮಾರ್ ಹಾಗೂ ನರ್ತನ್ ರಿಲೀಸ್ ಮಾಡಿದ್ದರು. ಇದೀಗ ಆ್ಯಕ್ಷನ್ ಟ್ರೇಲರ್‍ನ್ನು ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಉಮಾಪತಿ ಶ್ರೀನಿವಾಸ್, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ, ನಟರಾದ ನೀನಾಸಂ ಸತೀಶ್, ಧನಂಜಯ್, ಧನ್ವೀರ್ ಮುಂತಾದವರು ಸೇರಿ ಬಿಡುಗಡೆ ಮಾಡಿದರು. ಈ ಚಿತ್ರದಲ್ಲಿ ಮೊದಲಬಾರಿ ಸಹೋದರರಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಅಭಿನಯಿಸಿದ್ದು, ಟ್ರೇಲರ್‍ನಲ್ಲಿ ಈ ಮೂವರು ಅಬ್ಬರಿಸಿದ್ದಾರೆ.
‘ಇತ್ತೀಚಿನ ವರ್ಷಗಳಲ್ಲಿ ನಾನು ಮಾಡಿದ ಸಿನಿಮಾಗಳಲ್ಲಿ ನನ್ನ ಪಾತ್ರಗಳು ಡಾರ್ಕ್ ಶೇಡ್‍ನಲ್ಲಿ ಇದ್ದವು. ಆದರೆ ಈ ಸಿನಿಮಾ ಕಲರ್‍ಫುಲ್ ಆಗಿದೆ. ನನ್ನ ಮತ್ತು ಚೇತನ್ ಶೈಲಿಯ ಮಿಶ್ರಣ ಇದರಲ್ಲಿ ಆಗಿದೆ. ‘ಭರಾಟೆ’ ಕಥಾನಾಯಕ ಯಾವ ರೀತಿ ಇರುತ್ತಾನೆ ಎಂಬದರ ಕಿರುಪರಿಚಯವನ್ನು ‘ರೋರಿಸಮ್’ ಹಾಡಿನಲ್ಲಿ ಮಾಡಿಕೊಡಲಾಗಿದೆ. ಹಾಡನ್ನು ನೋಡಿದ ಮೇಲೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗಿದೆ. ನಾವುಗಳು ಎಷ್ಟೇ ಕಷ್ಟಪಟ್ಟರೂ ಅದಕ್ಕೆಲ್ಲಾ ಕಾರಣ ಚಿತ್ರತಂಡ. ಎಲ್ಲಾ ಕ್ರೆಡಿಟ್ ಟೀಮ್‍ಗೆ ಸಲ್ಲಬೇಕು. ಎರಡು ಹಾಡನ್ನು ಗೆಲ್ಲಿಸಿದ್ದಕ್ಕೆ ಥ್ಯಾಂಕ್ಸ್. ಮೂರನೆಯದನ್ನು ನಿಮಗೆ ಒಪ್ಪಿಸಿದ್ದೇವೆ, ನೋಡಿ ಹರಸಿ’ ಎಂದಿದ್ದಾರೆ ಶ್ರೀಮುರಳಿ.
ಅವರ ಪತ್ನಿ ವಿದ್ಯಾ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಈ ರೋರಿಸಂ ಗೀತೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂದ್ದು, ಸದ್ಯ ಟ್ರೆಂಡಿಂಗ್‍ನಲ್ಲಿದೆ. ಸುಪ್ರಿತ್ ನಿರ್ಮಾಣ ಮಾಡಿರುವ ‘ಭರಾಟೆ’ಯಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಜೊತೆಗೆ ವಿಶೇಷ ಪಾತ್ರದಲ್ಲಿ ರಚಿತಾ ರಾಮ್ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರವು ಮುಂದಿನ ತಿಂಗಳು 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ