ನವದೆಹಲಿ:
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ಬಂಧನ ಪ್ರಶ್ನಿಸಿ ಮುಖ್ಯಮಂತ್ರಿ ಆಪ್ತ ಬಿಭವ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಹೇಳಿದರು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಕುಮಾರ್ ಅವರು ಮೇ 13 ರಂದು ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದರು. ಮೇ 18ರಂದು ಅವರನ್ನು ಬಂಧಿಸಲಾಗಿತ್ತು. ತನ್ನ ಬಂಧನ ಕಾನೂನುಬಾಹಿರ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41A (ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗುವ ಸೂಚನೆ) ನಿಬಂಧನೆಗಳ ಸಂಪೂರ್ಣ ಉಲ್ಲಂಘನೆ ಮತ್ತು ಕಾನೂನು ಆದೇಶಕ್ಕೆ ವಿರುದ್ಧವಾಗಿದೆ ಎಂದು ಘೋಷಿಸಲು ನಿರ್ದೇಶನ ನೀಡಬೇಕೆಂದು ಕುಮಾರ್ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ದೆಹಲಿ ಪೊಲೀಸರು ತರಾತುರಿಯಲ್ಲಿ ಕುಮಾರ್ ಅವರನ್ನು ಬಂಧಿಸಿಲ್ಲ. ಕಾನೂನಿನ ಪ್ರಕಾರ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮನವಿ ಸಲ್ಲಿಸಿದರು.
ಕುಮಾರ್ ವಿರುದ್ಧ ವಿವಿಧ ಭಾರತೀಯ ದಂಡ ಸಂಹಿತೆ (IPC) ನಿಬಂಧನೆಗಳ ಅಡಿಯಲ್ಲಿ ಮೇ 16 ರಂದು ಎಫ್ ಐಆರ್ ದಾಖಲಿಸಲಾಗಿದೆ. ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ವಜಾಗೊಳಿಸಿತ್ತು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.