ಪೀಣ್ಯಾ ಫ್ಲೈ ಓವರ್‌ ಸಂಚಾರ: ಇಲ್ಲಿದೆ ಬಿಗ್‌ ಅಪ್‌ ಡೇಟ್‌…!

ಬೆಂಗಳೂರು

    ಪೀಣ್ಯ ಫ್ಲೈಓವರ್‌ನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಫ್ಲೈಓವರ್​ ದುರಸ್ತಿ ಯತ್ನ ನಡೆಯುತ್ತಿದೆ. ಆದರೆ, ಇದಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತಲೇ ಇವೆ. ಜುಲೈ 29 ರಿಂದ ಪೀಣ್ಯ ಪ್ಲೈಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳು ಓಡಾಡಬಹುದು ಎಂದು ಐಐಎಸ್‌ಇಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಆದರೆ, ಪ್ರತಿ ಶುಕ್ರವಾರ ಇಲ್ಲಿ ಫ್ಲೈಓವರ್ ಸಂಪೂರ್ಣ ಬಂದ್ ಮಾಡಬೇಕು. ವಾಹನ ಸವಾರರು ಸರ್ವೀಸ್ ರಸ್ತೆಯನ್ನೇ ಬಳಸಬೇಕು ಎಂದು ಐಐಎಸ್‌ಸಿ ತಜ್ಞರು ಸೂಚನೆ ನೀಡಿದ್ದರು.‌ 

   ಈ ಹಿನ್ನೆಲೆ ದಿನನಿತ್ಯದ ಕಾರ್ಯಗಳಿಗೆ ಓಡಾಡುವ ವಾಹನ ಸವಾರರನ್ನು ಹೊರತುಪಡಿಸಿ, ವೀಕೆಂಡ್‌ಗಳಿಗೆ ತುಮಕೂರು ಮಾರ್ಗವಾಗಿ, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆಗಳಿಗೆ ಹೋಗುವವರಿಗೆ ಈ ಫ್ಲೈಓವರ್ ವರದಾನವಾಗಿತ್ತು. ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೆ ಬೆಂಗಳೂರು ಬಿಟ್ಟು ಹೊರಹೋಗಲು ಅನುಕೂಲವಾಗುತ್ತಿತ್ತು. ಆದರೆ, ಪ್ರತಿ ಶುಕ್ರವಾರ ಈ ಫ್ಲೈಓವರ್ ಬಳಸಲು ಆಗದೆ ಜನರು ಟ್ರಾಫಿಕ್‌ನಲ್ಲೇ ಇರಬೇಕಾದ ಪರಿಸ್ಥಿತಿ ಸದ್ಯಕ್ಕಿದೆ.

   ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ, ಪಿಲ್ಲರ್‌ಗಳಲ್ಲಿ ಕೇಬಲ್ ಬದಲಿಸುವ ಕಾರ್ಯ ಕೇವಲ ಒಂದು ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಕೇಬಲ್ ಬದಲಿಸುವ ಕಾರ್ಯ ಇನ್ನೂ 8 ತಿಂಗಳವರೆಗೆ ಮುಂದುವರೆಯಲಿದೆ. 

   ಯಾವುದೇ ಕಾರಣಕ್ಕೂ ಫ್ಲೈಓವರ್‌ ನಲ್ಲಿ ಮತ್ತೆ ಸಮಸ್ಯೆ ಎದುರಾಗಬಾರದು ಎಂಬ ಅನ್ನೊ ಕಾರಣಕ್ಕೆ 1400 ಕೇಬಲ್‌ಗಳನ್ನು ಅಳವಡಿಸಲು ಐಐಎಸ್‌ಸಿ ಸೂಚಿಸಿದ್ದು, ಇದರಲ್ಲಿ ಇದುವರೆಗೂ 700 ಕೇಬಲ್‌ಗಳನ್ನು ಮಾತ್ರ ಬದಲಿಸಲಾಗಿದೆ. ತುಕ್ಕು ಹಿಡಿದಿರುವ ಎಲ್ಲಾ ಕೇಬಲ್ ಬದಲಿಸಲು ಮುಂದಾಗಿರುವುದರಿಂದ ಆ ಕಾಮಗಾರಿ ನಡೆಯುತ್ತಿದೆ. ಇನ್ನುಳಿದ ಕೇಬಲ್‌ಗಳನ್ನು ಅಳವಡಿಸಲು ಮುಂದಿನ 8 ತಿಂಗಳವರೆಗೆ ಸಮಯ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲಿಯವರೆಗೂ ಪ್ರತಿ ಶುಕ್ರವಾರ ಫ್ಲೈಓವರ್ ಬಂದ್ ಆಗಿರಲಿದೆ ಎಂದು ಐಐಎಸ್​​ಸಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಚಂದ್ರ ಕಿಶನ್ ತಿಳಿಸಿದ್ದಾರೆ. 

   ಈಗಾಗಲೇ ಫ್ಲೈಓವರ್ ಇದ್ದೂ ಇಲ್ಲದಂತಾಗಿದ್ದು, ವಾರದ ದಿನಗಳಲ್ಲಿ ಹೇಗೋ ವಾಹನ ಸವಾರರು ಟ್ರಾಫಿಕ್‌ನ ಸಮಸ್ಯೆ ಸಹಿಸಿಕೊಳ್ಳುತ್ತಿದ್ದಾರೆ. ಆದರೆ, ಶನಿವಾರ, ಭಾನುವಾರ ಬೆಂಗಳೂರು ಬಿಟ್ಟು ಹೊರಗೆ ಹೋಗಲು ಶುಕ್ರವಾರವೇ ಹೆಚ್ಚು ಜನರು ಈ ರಸ್ತೆ ಬಳಸುತ್ತಾರೆ. ಈ ವೇಳೆ ಗಂಟೆಗಟ್ಟಲೆ ಕಾದರೂ ಜನರು ನಗರಕ್ಕೆ ಬರಲು ಹಾಗೂ ಸಿಟಿಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.

   ಒಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಫ್ಲೈಓವರ್ ಸರಿಯಾಗುತ್ತದೆ ಎಂದು ಕಾಯುತ್ತಿದ್ದ ಜನರಿಗೆ ಆಡಳಿತ ವೀಕೆಂಡ್ ಶಾಕ್ ನೀಡಿದ್ದು, ದುರಸ್ತಿ ಕಾರ್ಯ ಮುಗಿಯುವವರೆಗೂ ವಾಹನ ಸವಾರರಿಗೆ ಟ್ರಾಫಿಕ್‌ನ ಕಿರಿಕಿರಿ ತಪ್ಪಿದ್ದಲ್ಲ.

Recent Articles

spot_img

Related Stories

Share via
Copy link