ನವದೆಹಲಿ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತಾಗಿ ಅವಹೇಳನಕಾರಿಯಾಗಿ ‘ಅಪಶಕುನ’ದ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಈ ಸಂಬಂಧ ಬಿಜೆಪಿ ದೂರು ದಾಖಲಿಸಿದೆ.
ಕಳೆದ ಭಾನುವಾರ ನವೆಂಬರ್ 19 ರಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದ ವೀಕ್ಷಣೆಗೆ ಪ್ರಧಾನಿ ಮೋದಿ ತೆರಳಿದ್ದರು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಸೋಲನ್ನಪ್ಪಿತ್ತು. ವಿಶ್ವ ಕಪ್ ಗೆಲುವಿನಿಂದ ಭಾರತ ವಂಚಿತವಾಗಿತ್ತು.
ಈ ಸಂದರ್ಭವನ್ನೇ ಬಳಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಂದ್ಯ ವೀಕ್ಷಿಸಲು ಪ್ರಧಾನಿ ಮೋದಿ ಹೋಗಿದ್ದ ಕಾರಣದಿಂದಲೇ ಭಾರತ ಸೋಲು ಕಂಡಿತು ಎಂದು ವ್ಯಂಗ್ಯವಾಡಿದ್ದರು. ಪ್ರಧಾನಿ ಮೋದಿ ಅವರನ್ನು ಅಪಶಕುನಕ್ಕೆ ಹೋಲಿಸಿದ್ದ ರಾಹುಲ್ ಗಾಂಧಿ, ಪ್ರಧಾನಿ ಕಾರಣದಿಂದಲೇ ಭಾರತ ಸೋಲು ಕಂಡಿತು ಎಂದು ಕುಟುಕಿದ್ದರು.
ಪಿಎಂ ಎಂದರೆ ‘ಪನೌತಿ ಮೋದಿ’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಉದ್ಯಮಿ ಗೌತಮ್ ಅದಾನಿ ಅವರು ಜನರ ಜೇಬಿಗೆ ಕನ್ನಾ ಹಾಕುವಾಗ ಮೋದಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ ಎಂದು . ಭಾರತಕ್ಕೆ ಪ್ರಧಾನಿ ಮೋದಿ ದುರಾದೃಷ್ಟ ತಂದರು ಎಂದು ಹೀಗಳೆದಿದ್ದರು. ಹಿಂದಿಯ ಪನೌತಿ ಎಂಬ ಪದಕ್ಕೆ ಕನ್ನಡದಲ್ಲಿ ಅಪಶಕುನ ಎನ್ನಲಾಗುತ್ತದೆ.
ಪ್ರಧಾನಿಯೊಬ್ಬರನ್ನು ಜೇಬುಗಳ್ಳ ಮತ್ತು ‘ಪನೌಟಿ’ಗೆ ಹೋಲಿಸುವುದು ಸ್ವೀಕಾರಾರ್ಹವಲ್ಲ. ಇದು ರಾಜಕೀಯ ಚರ್ಚೆಯ ಮಟ್ಟ ಹದಗೆಡುತ್ತಿರುವುದರ ಸಂಕೇತವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. “ಯಾವುದೇ ವ್ಯಕ್ತಿಯನ್ನು ಜೇಬುಗಳ್ಳರೆಂದು ಕರೆಯುವುದು ಕೆಟ್ಟ ನಿಂದನೆ ಮತ್ತು ವೈಯಕ್ತಿಕ ದಾಳಿಗೆ ಸಮನಾಗಿರುತ್ತದೆ ಆದರೆ ಅವರ ಪ್ರತಿಷ್ಠೆಗೆ ಹಾನಿ ಮಾಡುವ ಮತ್ತು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವ ಸ್ಪಷ್ಟ ಉದ್ದೇಶದಿಂದ ಅಂತಹ ಹೇಳಿಕೆಯನ್ನು ಮಾಡಲಾಗಿದೆ” ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಜಾತಿಯನ್ನು ಗುಜರಾತ್‌ನ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಸುಳ್ಳಿನ ಜಾಲವನ್ನು ಹರಡುವಲ್ಲಿ ತೊಡಗಿರುವ ಖರ್ಗೆ ಮತ್ತು ಗಾಂಧಿಯವರ ಹೇಳಿಕೆಗಳು ಅವರ ವಿರುದ್ಧ, ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ಮತ್ತು ಅವರ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡುತ್ತವೆ ಎಂದು ಪಕ್ಷವು ಪತ್ರದಲ್ಲಿ ತಿಳಿಸಿದೆ.
ಪ್ರಧಾನಿ ಮೋದಿ ಅವರು ಟಿವಿಗಳಲ್ಲಿ ಹಿಂದೂ ಹಾಗೂ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ. ಕೆಲವು ವೇಳೆ ಕ್ರಿಕೆಟ್ ಪಂದ್ಯ ವೀಕ್ಷಿಸಲೂ ಹೋಗುತ್ತಾರೆ. ಪ್ರಧಾನಿ ಮೋದಿ ಅವರು ಹೋದ ಹಲವು ಪಂದ್ಯಗಳಲ್ಲಿ ಸೋಲಾಗಿದೆ. ಅವರೊಬ್ಬ ಅಪಶಕುನ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆ ವಿರುದ್ದ ತಿರುಗಿ ಬಿದ್ದಿರುವ ಬಿಜೆಪಿ ನಾಯಕರು, ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.