
ಬೆಂಗಳೂರು: ವಿಧಾನ ಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಚಿವ ಸಂಪುಟಕ್ಕೆ ಸಣ್ಣ ಪ್ರಮಾಣದಲ್ಲಿ ಸರ್ಜರಿ ಮಾಡುವ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿದ್ದು, ಸಂಪುಟ ಸರ್ಜರಿ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇನ್ನೆರಡು ಮೂರು ದಿನಗಳಲ್ಲಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.
2ನೇ ಹಂತದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸ್ಥಾನ ಸಿಗದ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದು, ಇವರನ್ನು ಸಮಾಧಾನಪಡಿಸಲು ಸಂಪುಟದಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಮಾಡುವ ಚಿಂತನೆಯನ್ನು ಹೈಕಮಾಂಡ್ ಹಿಂದೆಯೇ ನಡೆಸಿತ್ತು.
ವಿಧಾನ ಮಂಡಲದ ಅಧಿವೇಶನ ಇದ್ದ ಕಾರಣ ಸಂಪುಟ ಸರ್ಜರಿ ಮುಂದಕ್ಕೆ ಹೋಗಿತ್ತು. ಈಗ ಅಧಿವೇಶನ ಮುಗಿದಿರುವುದರಿಂದ ಸಂಪುಟ ಸರ್ಜರಿಗೆ ಹೈಕಮಾಂಡ್ ಮುಂದಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ದೆಹಲಿಗೆ ಕರೆಸಿ ಚರ್ಚೆ ನಡೆಸುವ ಸಾಧ್ಯತೆ ಇದ್ದು, ಇದೇ ಬರುವ ಗುರುವಾರ ಇಲ್ಲವೇ ಶುಕ್ರವಾರ ಮುಖ್ಯಮಂತ್ರಿ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಒಂದು ಸ್ಥಾನ ಹೊರತುಪಡಿಸಿ ಎಲ್ಲಾ ಸಚಿವ ಸ್ಥಾನಗಳನ್ನು ತುಂಬಲಾಗಿದೆ. ಅಸಮಾಧಾನಗೊಂಡಿರುವ ಮೂರ್ನಾಲ್ಕು ಮಂದಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲು ಈಗಿರುವ ಸಚಿವರಲ್ಲಿ ಒಂದಿಬ್ಬರನ್ನು ಕೈ ಬಿಡುವ ಅನಿವಾರ್ಯತೆ ಇದೆ. ಜತೆಗೆ ಸಂಪುಟದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಿಲ್ಲ. ಹಾಗಾಗಿ ಮಹಿಳಾ ಶಾಸಕರೊಬ್ಬರಿಗೂ ಸಚಿವ ಸ್ಥಾನ ನೀಡಲೇಬೇಕಾಗುತ್ತದೆ. ಇದನ್ನೆಲ್ಲಾ ಗಮನಿಸಿದರೆ ಈಗ ಸಚಿವರಾಗಿರುವವಲ್ಲಿ ಒಂದಿಬ್ಬರನ್ನು ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ.
ಯಾರನ್ನು ಸಂಪುಟದಿAದ ಕೈಬಿಡಬೇಕು, ಯಾವ ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಹೈಕಮಾಂಡ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ದೆಹಲಿಗೆ ಕರೆಸಿಕೊಳ್ಳಲಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ ನಂತರ ಸಂಪುಟ ಸರ್ಜರಿ ಯಾವಾಗ ನಡೆಯುತ್ತದೆ, ಯಾರನ್ನು ಸಂಪುಟದಿAದ ಕೈ ಬಿಡಲಾಗುತ್ತದೆ ಎಂಬೆಲ್ಲಾ ವಿಚಾರಗಳು ಅಂತಿಮವಾಗಲಿವೆ.
ಈಗಿನ ಸಚಿವ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಕುರುಬ ಸಮುದಾಯದ ಬಸವರಾಜ ನೀರಣ್ಣ ಶಿವಣ್ಣನವರ್ ರವರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡ ಹೇರಿದ್ದಾರೆ. ಶಿವಣ್ಣನವರ ಸಂಪುಟ ಸೇರ್ಪಡೆ ತಡವಾಗಿರುವುದಕ್ಕೂ ಸಿದ್ದರಾಮಯ್ಯ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಹೈಕಮಾಂಡ್ ರಾಜ್ಯ ಸಚಿವ ಸಂಪುಟಕ್ಕೆ ಸಣ್ಣ ಪ್ರಮಾಣದಲ್ಲಿ ಸರ್ಜರಿ ಮಾಡುವ ತೀರ್ಮಾನ ಕೈಗೊಂಡಿದ್ದು, ಈ ವಾರದೊಳಗೆ ಬಹುತೇಕ ಎಲ್ಲವೂ ಅಂತಿಮಗೊಳ್ಳಲಿದೆ.
ಈಗಾಗಲೇ ಸಚಿವರಾಗಿರುವವರಲ್ಲಿ ಯಾರನ್ನು ಕೈಬಿಡಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿದ್ದು, ಸಂಪುಟದಿAದ ಸಚಿವರನ್ನು ಕೈಬಿಟ್ಟರೆ ಅವರು ಬಂಡಾಯ ಏಳುವ ಸಾಧ್ಯತೆ ಇದೆ.
ಒಂದು ವೇಳೆ ಸಂಪುಟ ಸರ್ಜರಿ ಮಾಡದೇ ಉಳಿದರೆ ಸಚಿವ ಸ್ಥಾನ ಸಿಗದ ಹಿರಿಯ ಶಾಸಕರ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸAಪುಟ ಸರ್ಜರಿ ತಂತಿಯ ಮೇಲಿನ ನಡಿಗೆಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಈ ಹಿಂದೆ 2ನೇ ಹಂತದ ಸಂಪುಟ ವಿಸ್ತರಣೆಯಾದ ಸಂದರ್ಭದಲ್ಲಿ ಅಸಮಾಧಾನಿತ ಹಿರಿಯ ಶಾಸಕರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಸಮಾಧಾನಿತ ಹಿರಿಯ ಶಾಸಕರಲ್ಲಿ ಕೆಲವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸುಳಿವು ನೀಡಿದ್ದರು. ಹಾಗಾಗಿ ವಿಧಾನಸಭಾ ಅಧಿವೇಶನ ಮುಗಿರುವ ಈ ಸಂದರ್ಭದಲ್ಲಿ ಅಸಮಾಧಾನಿತ ಕೆಲ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡುವ ಅನಿವಾರ್ಯತೆ ಎದುರಾಗಿದೆ.








