ನವದೆಹಲಿ:
ಸೌದಿ ಅರೇಬಿಯಾ ದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮನಕಂಡತ್ತಿಲ್ ತೆಕ್ಕೆತಿ ಅಲಿಯಾಸ್ ಶೀಲಾ ಅಲ್ಲ್ಯಾನಿ ಯನ್ನು ಇಂಟರ್‌ಪೋಲ್ ಸಹಕಾರದೊಂದಿಗೆ ಮರಳಿ ಕರೆತರುವಲ್ಲಿ ಕೇಂದ್ರ ತನಿಖಾ ದಳ ಯಶಸ್ವಿಯಾಗಿದೆ ಎಂದು ಸಂಸ್ಥೆಯು ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯ ದ ಸಹಯೋಗದೊಂದಿಗೆ ಸಿಬಿಐ, ಸೌದಿ ಅರೆಬಿಯಾಗೆ ಪರಾರಿಯಾಗಿದ್ದ ಮನಕಂಡತ್ತಿಲ್ ತೆಕ್ಕೆತಿಯನ್ನು 9 ಅಕ್ಟೋಬರ್ 2025ರಂದು ಭಾರತಕ್ಕೆ ಮರಳಿ ಕರೆತಂದಿದೆ ಪ್ರಕಟಣೆ ತಿಳಿಸಿದೆ.
ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮನಕಂಡತ್ತಿಲ್ ತೆಕ್ಕೆತಿ ಅಲಿಯಾಸ್ ಶೀಲಾ ಅಲ್ಲ್ಯಾನಿ ವಿರುದ್ಧ 5 ಅಕ್ಟೋಬರ್ 2023 ರಂದು ಇಂಟರ್‌ಪೋಲ್ ಮೂಲಕ ಕೇಂದ್ರ ತನಿಖಾ ದಳ ರೆಡ್ ನೋಟಿಸ್ ಜಾರಿ ಮಾಡಿತ್ತು. ಬಳಿಕ, ಸಿಬಿಐ ಅಧಿಕಾರಿಗಳ ತಂಡವೊಂದು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ ಆರೋಪಿಯನ್ನು ಭಾರತಕ್ಕೆ ಕರೆತಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಟರ್‌ಪೋಲ್ ಹೊರಡಿಸುವ ರೆಡ್ ನೋಟಿಸುಗಳನ್ನು ಎಲ್ಲಾ ದೇಶಗಳ ಕಾನೂನು ಜಾರಿ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ. ಈ ಮೂಲಕ ಬೇರೆ ಬೇರೆ ದೇಶಗಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಸಿಬಿಐ ತಿಳಿಸಿದೆ.
ದೇಶದಲ್ಲಿ ಘೋರ ಅಪರಾಧಗಳನ್ನು ಎಸಗಿ ವಿದೇಶಗಳಿಗೆ ಪರಾರಿಯಾಗುವ ಅಪರಾಧಿಗಳನ್ನು ಹಿಡಿಯುವುದು ಭಾರತದ ಕಾನೂನು ಜಾರಿ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪರಾಧ ನಿಯಂತ್ರಣವನ್ನು ಬಲಪಡಿಸಲು, ಭಾರತ ಸರ್ಕಾರವು ಜನವರಿ 7, 2025ರಂದು ‘ಭಾರತ್‌ಪೋಲ್’ ಪೋರ್ಟಲ್‌ಗೆ ಚಾಲನೆ ನೀಡಿತ್ತು. ಭಾರತದಲ್ಲಿ ಇಂಟರ್‌ಪೋಲ್‌ನ ರಾಷ್ಟ್ರೀಯ ಕೇಂದ್ರ ಬ್ಯೂರೋ ಆಗಿ ಕಾರ್ಯನಿರ್ವಹಿಸುವ ಸಿಬಿಐ, ಇಂಟರ್‌ಪೋಲ್‌ನಿಂದ ಪಡೆದಿರುವ ಮಾಹಿತಿಗಳನ್ನು ಭಾರತ್‌ಪೋಲ್ ಮೂಲಕ ದೇಶದಾದ್ಯಂತ ಇರುವ ಭದ್ರತಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತದೆ.
ಕಳೆದ ಕೆಲ ವರ್ಷಗಳಲ್ಲಿ ಪರಾರಿಯಾಗಿದ್ದ 130ಕ್ಕೂ ಹೆಚ್ಚು ವಾಂಟೆಡ್ ಅಪರಾಧಿಗಳನ್ನು ಇಂಟರ್‌ಪೋಲ್ ಸಹಕಾರದೊಂದಿಗೆ ಭಾರತಕ್ಕೆ ಮರಳಿ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಿಬಿಐ ತಿಳಿಸಿದೆ. ಈ ಕಾರ್ಯಾಚರಣೆಯು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಾಂಟೆಡ್ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಮರಳಿ ಕರೆತರಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ವದ ಯಶಸ್ಸನ್ನು ಸೂಚಿಸುತ್ತದೆ.








