ಕೇಂದ್ರ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಸಿಗಲಿದ್ಯಾ ಗುಡ್‌ನ್ಯೂಸ್?

ನವದೆಹಲಿ :

   ಹಿರಿಯ ನಾಗರಿಕರು, ಸಂಬಳ ಪಡೆಯುವ ತೆರಿಗೆದಾರರು ಈ ಬಾರಿಯ ಕೇಂದ್ರ ಬಜೆಟ್‌ 2024 ರ ಮೇಲೆ ಭರ್ಜರಿ ನಿರೀಕ್ಷೆಗಳನ್ನಿರಿಸಿಕೊಂಡಿದ್ದಾರೆ.

  ಹೆಚ್ಚಿನ ಹಣದುಬ್ಬರ, ಜೀವನ ವೆಚ್ಚಗಳಿಂದ ಜನಸಾಮಾನ್ಯರ ನಿರೀಕ್ಷೆ ಬಜೆಟ್ ಮೇಲೆ ನಿಂತಿದೆ. ಹಿರಿಯ ನಾಗರಿಕರು ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ಥಿರ ಆದಾಯದ ಹೂಡಿಕೆಗಳು ಅಥವಾ ಬಾಡಿಗೆ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ ಎಂಬುದು ಇಲ್ಲಿ ಪ್ರಮುಖವಾದ ಅಂಶವಾಗಿದೆ.ಇತರರಿಗೆ ಹೋಲಿಸಿದಾಗ ಇವರಿಗೆ ಹೆಚ್ಚಿನ ನೆರವು ಹಾಗೂ ಮಾರ್ಗದರ್ಶನ ಬೇಕಾಗಿದೆ. 

  ಭಾರತದಲ್ಲಿನ ಗ್ಲೋಬಲ್ ಮೊಬಿಲಿಟಿ ಸರ್ವೀಸಸ್, ತೆರಿಗೆ, KPMG ನ ಪಾಲುದಾರ ಮತ್ತು ಮುಖ್ಯಸ್ಥ ಪರಿಝಾದ್ ಸಿರ್ವಾಲ್ಲಾ ಹೇಳುವಂತೆ, ಅಂಕಿಅಂಶಗಳ ಪ್ರಕಾರ, ಭಾರತದ ಜನಸಂಖ್ಯೆಯ 10 ಪ್ರತಿಶತಕ್ಕಿಂತ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದಾರೆ.

  ಹಿರಿಯ ನಾಗರಿಕರಿಗಾಗಿ ಇರುವ ಕೆಲವೊಂದು ಯೋಜನೆಗಳಾದ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ, ಆಯುಷ್ಮಾನ್ ಭಾರತ್ ಮೊದಲಾದವುಗಳ ಮೇಲೆ ಗಮನವಿರಿಸಿಕೊಂಡು ಕೇಂದ್ರ ಈ ಬಾರಿಯ ಬಜೆಟ್‌ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

  ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್‌ಗೆ ಪ್ರಸ್ತುತ ಮಿತಿ 50,000 ರೂ. ಹೆಚ್ಚಿನ ಸಂದರ್ಭಗಳಲ್ಲಿ ಹಿರಿಯ ನಾಗರಿಕರು ಅವರು ಗಳಿಸುವ ಪಿಂಚಣಿ ಆದಾಯದ ವಿರುದ್ಧ ಈ ಕಡಿತವನ್ನು ಪಡೆಯುತ್ತಾರೆ. ಜೀವನ ವೆಚ್ಚ ಹಾಗೂ ಇನ್ನಿತರ ಅಂಶಗಳನ್ನು ಪರಿಗಣಿಸಿ ಇದನ್ನು ರೂ 1 ಲಕ್ಷಕ್ಕೆ ಏರಿಸಬಹುದು.

  ಪ್ರಸ್ತುತ, ಬ್ಯಾಂಕ್ ಠೇವಣಿ, ಪೋಸ್ಟ್ ಆಫೀಸ್ ಠೇವಣಿ ಇತ್ಯಾದಿಗಳಲ್ಲಿ ಗಳಿಸಿದ ಬಡ್ಡಿಯ ಖಾತೆಯಲ್ಲಿ ನಿವಾಸಿ ಹಿರಿಯ ನಾಗರಿಕರಿಗೆ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ರೂ 50,000 ಕಡಿತವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಇದನ್ನು ರೂ 1 ಲಕ್ಷಕ್ಕೆ ಏರಿಸಲೂಬಹುದು ಎಂದು ಸಿರ್ವಾಲ್ಲಾ ಹೇಳುತ್ತಾರೆ.

  ನಿಯಮಿತ ಪಿಂಚಣಿಗಳನ್ನು ಪಡೆಯದ ಮತ್ತು ಮನೆಯನ್ನು ಬಾಡಿಗೆಗೆ ಪಡೆಯುತ್ತಿರುವ ವಯಸ್ಸಾದ ವ್ಯಕ್ತಿಗಳಿಗೆ ತೆರಿಗೆ ಕಡಿತದ ಅನುಷ್ಠಾನದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.ಬಾಡಿಗೆ ಮನೆಗಳಲ್ಲಿ ವಾಸಿಸುವ ಹಿರಿಯ ನಾಗರಿಕರ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಅವರಿಗೆ ಅಗತ್ಯ ಪರಿಹಾರ ಮತ್ತು ಅವರ ವಸತಿ ವೆಚ್ಚದಲ್ಲಿ ಸ್ಥಿರತೆಯನ್ನು ಒದಗಿಸುತ್ತದೆ.

  ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ಕಂತುಗಳ ಮೇಲಿನ ಕಡಿತವನ್ನು ಸರ್ಕಾರವು ಹೆಚ್ಚಿಸಬಹುದು ಎಂಬ ಊಹಾಪೋಹವಿದ್ದು ಪ್ರಸ್ತುತ ರೂ 50,000 ದಿಂದ ರೂ 1 ಲಕ್ಷಕ್ಕೆ ಏರಿಸಬಹುದು ಎಂದು ಹೇಳಲಾಗುತ್ತಿದೆ. ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಹಿರಿಯರಿಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ.

  ಹಿರಿಯ ನಾಗರಿಕರಿಗೆ ದೀರ್ಘಾವಧಿಯ ಬಂಡವಾಳ ಗಳಿಕೆ (ಎಲ್‌ಟಿಸಿಜಿ) ತೆರಿಗೆ ವಿನಾಯಿತಿ ಮಿತಿಯನ್ನು ಸರ್ಕಾರವು 1 ಲಕ್ಷದಿಂದ ಕನಿಷ್ಠ 2 ಲಕ್ಷಕ್ಕೆ ಏರಿಸುವ ನಿರೀಕ್ಷೆಯಿದೆ.ಈ ಏರಿಕೆಯು ಹಿರಿಯ ನಾಗರಿಕರಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನೊದಗಿಸಲಿದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಬಂಡವಾಳದ ಲಾಭಗಳ ಮೇಲೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ, ಇದು ಹಣಕಾಸು ಮಾರುಕಟ್ಟೆಗಳಲ್ಲಿ ನಿರಂತರ ಹೂಡಿಕೆಯನ್ನು ಉತ್ತೇಜಿಸುತ್ತದೆ.

   ಇವುಗಳ ಹೊರತಾಗಿ, ಹಿರಿಯ ನಾಗರಿಕರು ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಗಳಿಗೆ ತೆರಿಗೆ ವಿನಾಯಿತಿ ಮಿತಿಗಳನ್ನು ಹೆಚ್ಚಿಸುವ ಭರವಸೆಯನ್ನಿರಿಸಿಕೊಂಡಿದ್ದಾರೆ. NPS, EPS ಮತ್ತು ಇತರ ಮೂಲಗಳಿಂದ ತೆರಿಗೆ ಮುಕ್ತ ಪಿಂಚಣಿಗಳನ್ನು ಸಹ ನಿರೀಕ್ಷಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap