ವಯನಾಡ್:
ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ “ಕುಂಟುತ್ತಿದೆ” ಇದಕ್ಕೆ ಮುಖ್ಯ ಕಾರಣ ನಮ್ಮ ಒಕ್ಕೂಟ ಮಾಡಿರುವ ಸಾಧನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ದೇಶದ ಜನರು ಬಿಜೆಪಿ ಮತ್ತು ನರೇಂದ್ರ ಮೋದಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಆದ್ದರಿಂದ ಪ್ರಧಾನಿ ಈಗ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಗಾಂಧಿ ಸಲಹೆ ನೀಡಿದರು.
ಇಂದು ಕೇರಳದ ವಯನಾಡು ಜಿಲ್ಲೆಯ ಕಲ್ಪೆಟ್ಟಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಸತ್ಯವೇನೆಂದರೆ, ಇಂದು ನಮ್ಮದು(ಕೇಂದ್ರದಲ್ಲಿ) ಅಂಗವಿಕಲ ಸರ್ಕಾರವಾಗಿದೆ. ಇಂಡಿಯಾ ಬಣದ ಮಾರಕ ಹೊಡೆತದಿಂದ ಅದಕ್ಕೆ ನೇರವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಇದು ಖಂಡಿತವಾಗಿಯೂ ದೇಶವನ್ನು ಮುನ್ನಡೆಸುವ ಸಾಮರ್ಥ್ಯವಿರುವ ಸರ್ಕಾರವಲ್ಲ ಎಂದು ವಾಗ್ದಾಳಿ ನಡೆಸಿದರು.
ವಯನಾಡ್ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಭಾರಿ ಅಂತರದಿಂದ ಗೆದ್ದ ನಂತರ ಇಂದು ಮೊದಲ ಬಾರಿಗೆ ದೇವರ ನಾಡಿಗೆ ರಾಹುಲ್ ಗಾಂಧಿ ಆಗಮಿಸಿದ್ದರು. ಇಂಡಿ ಬಣ “ನರೇಂದ್ರ ಮೋದಿ ಮಾದರಿಯನ್ನು ಸಂಪೂರ್ಣವಾಗಿ ನಾಶಪಡಿಸಿದೆ” ಎಂದು ಹೇಳಿದರು.
ಇಂದು ನೀವು ನೋಡುತ್ತಿರುವ ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ನೋಡಿದ್ದಕ್ಕಿಂತ ಸಂಪೂರ್ಣ ಭಿನ್ನವಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.