ಮುಂಬಯಿ:
12 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಆಟಗಾರರು ಈಗಾಗಲೇ ತವರಿಗೆ ಆಗಮಿಸಿದ್ದಾರೆ. ಆದರೆ ಈ ಬಾರಿ ಬಿಸಿಸಿಐ ವಿಜಯೋತ್ಸವ ಮೆರವಣಿಗೆ ನಡೆಸದಿರಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಟಿ20 ವಿಶ್ವಕಪ್ನೊಂದಿಗೆ ತಾಯ್ನಾಡಿಗೆ ಕಾಲಿಟ್ಟ ಭಾರತ ತಂಡಕ್ಕೆ ಪ್ರತಿ ಹೆಜ್ಜೆಯಲ್ಲೂ ಅದ್ದೂರಿ ಸ್ವಾಗತ ಸಿಕ್ಕಿತ್ತು.
ವೆಸ್ಟ್ಇಂಡೀಸ್ನ ಬಾರ್ಬಡೋಸ್ನಿಂದ ಹೊರಟ ಟೀಮ್ ಇಂಡಿಯಾ ವಿಮಾನ ನೇರವಾಗಿ ದೆಹಲಿಗೆ ಬಂದಿಳಿದ್ದ ರೋಹಿತ್ ಶರ್ಮ ಪಡೆ ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ತೆರಳಿ ಅವರೊಂದಿಗೆ ಉಪಹಾರ ಸೇವಿಸಿ ವಿಶ್ವಕಪ್‌ನ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದರು.
ಮೋದಿ ಭೇಟಿ ಬಳಿಕ ಮುಂಬೈಗೆ ತೆರಳಿದ್ದ ಟೀಮ್ ಇಂಡಿಯಾಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ಕಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳು ಅಗ್ನಿಶಾಮಕ ವಾಹನಗಳ ಮೂಲಕ ಜಲ ನಮನ ಸಲ್ಲಿಸಿದ್ದರು. ವಾಂಖೆಡೆ ಸ್ಟೇಡಿಯಂ ಬಳಿ ತೆರೆದ ಬಸ್ನಲ್ಲಿ ವಿಜಯೋತ್ಸವ ಮೆರವಣಿಗೆ ಕೂಡ ನಡೆಸಲಾಗಿತ್ತು. ಆದರೆ ಈ ಬಾರಿ ಐಪಿಎಲ್ ಟೂರ್ನಿ ಪ್ರಾರಂಭವಾಗುವ ನಿಟ್ಟಿನಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ ಎಲ್ಲ ಆಟಗಾರರು, ಕೋಚ್‌ಗಳು ಭಾರತಕ್ಕೆ ಆಗಮಿಸಿದ್ದಾರೆ. ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ ಮುಂಬೈಗೆ ಆಗಮಿಸಿದ್ದರೆ, ರವೀಂದ್ರ ಜಡೇಜಾ ಚೆನ್ನೈಗೆ ಬಂದಿಳಿದಿದ್ದಾರೆ. ಉಳಿದ ಆಟಗಾರರು ತಮ್ಮ ತವರಿಗೆ ಮರಳಿದ್ದಾರೆ. ಇನ್ನೆರಡು ದಿನಗಳಲ್ಲಿ ಇವರೆಲ್ಲ ಐಪಿಎಲ್ ಶಿಬಿರ ಆರಂಭಿಸಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದ್ದು, ಆಟಗಾರರು ತಾವು ಪ್ರತಿನಿಧಿಸುವ ಫ್ರಾಂಚೈಸಿ ಕ್ಯಾಂಪ್ಗಳನ್ನು ಕೂಡಿಕೊಳ್ಳುತ್ತಿದ್ದಾರೆ. ತಂಡ ಕೂಡಿಕೊಳ್ಳುವುದಕ್ಕೂ ಮುನ್ನ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದ್ದು, ಈ ಕಾರಣಕ್ಕಾಗಿ ಓಪನ್ ಬಸ್ ರ್‍ಯಾಲಿ ಮತ್ತು ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಭಾನುವಾರ(ಮಾ.9) ದುಬೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಅಲ್ಲದೆ 25 ವರ್ಷಗಳ ಹಿಂದಿನ ಫೈನಲ್ ಸೋಲಿನ ಸೇಡನ್ನು ಕೂಡ ಭಾರತ ತೀರಿಸಿಕೊಂಡಿತ್ತು. 2000 ದಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತವನ್ನು ಸೋಲಿಸಿ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು.
