ಚಿಕ್ಕಮಗಳೂರು
ಕರ್ನಾಟಕದಲ್ಲಿ ಇತ್ತೀಚಿಗೆ ಪ್ಯಾಲೆಸ್ತೀನ್ ಬಾವುಟ ಹಾರಿಸುವುದು, ಘೋಷಣೆ ಕೂಗುವುದು ಪ್ರಕರಣ ಮೇಲಿಂದ ಮೇಲೆ ವರದಿಯಾಗುತ್ತಿವೆ. ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ನಾಲ್ವರು ಅಪ್ರಾಪ್ತರು ಪ್ಯಾಲೆಸ್ತೀನ್ ಧ್ವಜ ಹಿಡಿದುಕೊಂಡು ಬೈಕ್ನಲ್ಲಿ ಸುತ್ತಾಡಿದ್ದರು. ಇದಾದ ಬಳಿಕ ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಗಿತ್ತು. ಇದೀಗ ಮತ್ತೆ ಚಿಕ್ಕಮಗಳೂರಿನಲ್ಲಿ ಯುವಕನೋರ್ವ ಫ್ರೀ ಪ್ಯಾಲೆಸ್ತೀನ್ ಬರಹ ಮತ್ತು ಧ್ವಜವಿರುವ ಟೀ ಶರ್ಟ್ ಹಾಕಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾನೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಣಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಯುವಕನ ಪೋಸ್ಟ್ ಕಂಡ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ಯಾಲೆಸ್ತೀನ್ ವಿಚಾರವಾಗಿ ಮುಸ್ಲಿಂ ಯುವಕರಿಗೆ ಯಾರೋ ಪ್ರಚೋದನೆ ನೀಡುತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕೆಂದು ಹಿಂದೂ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಪ್ಯಾಲೆಸ್ತೀನ್ಗೂ ಇವರಿಗೂ ಏನು ಸಂಬಂಧ? ಪ್ಯಾಲೆಸ್ತೀನ್ ಬಗ್ಗೆ ಆಸಕ್ತಿ ತೋರಿಸುತ್ತಾರೆ ಅಂದರೆ ಇವರು ಎಲ್ಲಿದ್ದಾರೆ? ಅಪ್ರಾಪ್ತ ಹುಡುಗರ ತಲೆಕೆಡಿಸಿದ್ದು ಯಾರು? ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು, ಇದು ದೇಶದ ಪ್ರಶ್ನೆ. ಈ ಯುವಕರ ತಲೆಕೆಡಿಸಿದ್ದು ಯಾರೆಂದು ತನಿಖೆಯಾಗಬೇಕು. ಇದು ದೇಶಕ್ಕೆ ಬೆಂಕಿ ಹಚ್ಚುವ ಷಡ್ಯಂತ್ರದ ಭಾಗವಾಗಬಾರದು ಎಂದು ಪರಿಷತ್ನ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದರು.
ಇವರಿಗೆ ಪ್ಯಾಲೆಸ್ತೀನ್ ಧ್ವಜ, ಟೀ ಶರ್ಟ್ ಸಿಕ್ಕಿದ್ದೆಲ್ಲಿ, ತಯಾರಿಸಿದ್ದೆಲ್ಲಿ? ಇದರ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ರಾಜ್ಯದಾದ್ಯಂತ ವರದಿಯಾಗಿರುವ ಪ್ಯಾಲೆಸ್ತೀನ್ ಧ್ವಜ ಹಾರಾಟ ಮತ್ತು ಘೋಷಣೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು, ತನಿಖೆ ನಡೆಸಬೇಕು ಎಂದು ಸಿಟಿ ರವಿ ಆಗ್ರಹಿಸಿದರು
ಈದ್ ಮಿಲಾದ್ ಮೆರವಣಿಗೆ ವೇಳೆ ಕೋಲಾರದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಲಾಗಿತ್ತು. ಕೂಡಲೆ ಎಚ್ಚೆತ್ತ ಪೊಲೀಸರು ಪ್ಯಾಲೆಸ್ತೀನ್ ಧ್ವಜ ಹಾರಿಸದಂತೆ, ರಾಷ್ಟ್ರ ಧ್ವಜ ಹಾರಿಸುವಂತೆ ಮುಸ್ಲಿಂ ಮುಖಂಡರಿಗೆ ಸೂಚಿಸಿದರು. ಇನ್ನು, ಚಿತ್ರದುರ್ಗದಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಗಿತ್ತು. ಇದಕ್ಕೂ ಮುನ್ನ ಚಿಕ್ಕಮಗಳೂರಿನಲ್ಲಿ ನಾಲ್ವರು ಅಪ್ರಾಪ್ತರು ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್ ಮೇಲೆ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ಯಾಲೆಸ್ತೀನ್ ದೇಶಕ್ಕೆ ಕೇಂದ್ರ ಸರ್ಕಾರವೇ ಬೆಂಬಲ ನೀಡಿದೆ. ಹೀಗಾಗಿ ಆ ದೇಶದ ಧ್ವಜ ಹಿಡಿದರೆ ತಪ್ಪೇನೂ ಇಲ್ಲ. ನಮ್ಮ ದೇಶದಲ್ಲಿ ಬೇರೆ ದೇಶದ ಪರ ಘೋಷಣೆ ಕೂಗಬಾರದು. ಹಾಗೆ ಮಾಡಿದರೆ ದೇಶದ್ರೋಹವಾಗುತ್ತದೆ ಎಂದ ಸಚಿವ ಜಮೀರ್ ಅಹಮದ್ ಖಾನ್ ಸಮರ್ಥನೆ ಮಾಡಿಕೊಂಡಿದ್ದರು.