ಮುಡಾ ಹಗರಣ : ಸಿಎಂ ಪತ್ನಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು….!

ಮೈಸೂರು

    ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಒಂದಲ್ಲ ಒಂದು ಕಂಟಕ ತಪ್ಪುತ್ತಲೇ ಇಲ್ಲ. ಒಂದೆಡೆ, ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್​ನಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ಈ ಸಂದರ್ಭದಲ್ಲೇ ಇದೀಗ ಮೈಸೂರಿನಲ್ಲಿ ಅವರ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಾಗಿದೆ. ನಕಲಿ ಸಹಿ ವಿಚಾರವಾಗಿ ಪಾರ್ವತಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

   ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶದ ಬಗ್ಗೆ ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಾರ್ವತಿ ಬರೆದಿದ್ದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಸಹಚರರ ವಿರುದ್ಧವೂ ಕ್ರಮ ವಹಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

   ಸಿಎಂ ಬಿಡುಗಡೆ ಮಾಡಿದ್ದ ಪತ್ರದಲ್ಲಿ ವೈಟ್ನರ್ ಹಿಂದಿನ ಅಕ್ಷರ ತೋರಿಸಲಾಗಿತ್ತು. ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ಅಕ್ಷರಗಳ ಮೇಲೆ ವೈಟ್ನರ್ ಹಾಕಲಾಗಿತ್ತು. ಈಗ ಆ ಮೂಲ ಪತ್ರ ತೋರಿಸಿರುವ ಬಗ್ಗೆಯೇ ದೂರು ದಾಖಲಾಗಿದೆ. ಪತ್ರದಲ್ಲಿರುವ ಪಾರ್ವತಿ ಅವರ ಸಹಿ ಹಾಗೂ ಮಾಹಿತಿ ಹಕ್ಕಿನಲ್ಲಿ ಪಡೆದ ಪತ್ರದಲ್ಲಿ ಇರುವ ಸಹಿ ಬದಲಾವಣೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವೈಟ್ನರ್ ಹಿಂದಿನ ಪದಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಎಂ.ಲಕ್ಷ್ಮಣ್ ಹಾಗೂ ಪಾರ್ವತಿ ಸಂಚು ರೂಪಿಸಿ ಸುಳ್ಳು ಪತ್ರ ಸೃಷ್ಟಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಪಾರ್ವತಿ ಸಹಿಯಲ್ಲಿ ಒಟ್ಟು ಒಂಬತ್ತು ವ್ಯತ್ಯಾಸಗಳನ್ನು ದೂರುದಾರರು ಗುರುತಿಸಿದ್ದಾರೆ.

ದೂರುದಾರರು ಗುರುತಿಸಿರುವ 9 ಸಹಿ ವ್ಯತ್ಯಾಸಗಳು

  1. ಸಹಿಗಳ ಪಕ್ಕದಲ್ಲಿರುವ ಎಕ್ಸ್ ಗುರುತುಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ (ಬೇರೆ, ಬೇರೆ ರಿತಿಯಾಗಿದೆ).
  2. ನನ್ನ ಬಳಿ ಇರುವ ದಾಖಲೆಯಲ್ಲಿ ಇರುವ ಸಹಿಗೂ ಮತ್ತು ಪಕ್ಕದಲ್ಲಿರುವ ಎಕ್ಸ್ ಗುರುತಿಗೂ ಅಂತರ ಕಡಿಮೆ ಇರುವುದು ಕಂಡು ಬಂದರೆ, ನಂತರ ಬಿಡುಗಡೆ ಮಾಡಲಾದ ವೀಡಿಯೋದಲ್ಲಿ ಕಂಡು ಬರುವ ದಾಖಲೆಯ ಸಹಿಗೂ ಮತ್ತು ಪಕ್ಕದಲ್ಲಿರುವ ಎಕ್ಸ್ ಗುರುತಿಗೂ ಅಂತರ ಹೆಚ್ಚು ಇರುವುದು ಕಂಡು ಬರುತ್ತದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.
  3. ನನ್ನ ಬಳಿ ಇರುವ ದಾಖಲೆಯಲ್ಲಿ ತ ಅಕ್ಷರ ಪಕ್ಕದಲ್ಲೇ ಪಿ ಅಕ್ಷರದ ಕೆಳಭಾಗದ ಗೆರೆ ಬಂದಿರುವುದು ಕಂಡು ಬರುತ್ತದೆ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿ ತ ಅಕ್ಷರದ ಮೇಲೆ ಪಿ ಅಕ್ಷರದ ಗೆರೆ ಇರುವುದು ಕಂಡು ಬರುತ್ತದೆ ಎಂದು ಅವರು ಆರೋಪಿಸಿದ್ದಾರೆ.
  4. ನನ್ನ ಬಳಿ ಇರುವ ದಾಖಲೆಯಲ್ಲಿ ಪಿ ಅಕ್ಷರದ ಉದ್ದಗೆರೆಯ ಮೇಲ್ಬಾಗದಲ್ಲಿ ಮುಂದೆ ಅಡ್ಡಗೆರೆ ಬಂದಿರುವುದಿಲ್ಲ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿ ಪಿ ಅಕ್ಷರದ ಉದ್ದಗೆರೆಯ ಮೇಲ್ಬಾಗದಲ್ಲಿ ಉದ್ದಗೆರೆಯ ಮುಂದೆ ಅಡ್ಡಗೆರೆ ಬಂದಿರುತ್ತದೆ ಎಂದು ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ.
  5. ನನ್ನ ಬಳಿ ಇರುವ ದಾಖಲೆಯಲ್ಲಿರುವ ಆರ್ ಅಕ್ಷರಕ್ಕೂ, ವೀಡಿಯೋದಲ್ಲಿ ಕಂಡು ಬರುವ ದಾಖಲೆ ಯಲ್ಲಿರುವ ಆ‌ರ್ ಅಕ್ಷರಕ್ಕೂ ವ್ಯತ್ಯಾಸ ಕಂಡು ಬರುತ್ತದೆ ಎಂದು ಅವರು ದೂರಿದ್ದಾರೆ.
  6. ನನ್ನ ಬಳಿ ಇರುವ ದಾಖಲೆಯಲ್ಲಿರುವ ವಿ ಅಕ್ಷರಕ್ಕೂ, ವೀಡಿಯೋದಲ್ಲಿ ಕಂಡು ಬರುವ ದಾಖಲೆ ಯಲ್ಲಿರುವ ವಿ” ಅಕ್ಷರಕ್ಕೂ ವ್ಯತ್ಯಾಸ ಕಂಡು ಬರುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
  7. ನನ್ನ ಬಳಿ ಇರುವ ದಾಖಲೆಯಲ್ಲಿರುವ ಟಿ ಅಕ್ಷರದ ಮೇಲ್ಬಾಗದಲ್ಲಿ ಎರಡು ಗೆರೆಗಳ ಮಧ್ಯೆ ಅಂತರ ಕಂಡು ಬರುವುದಿಲ್ಲ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿರುವ ಟಿ ಅಕ್ಷರದ ಮೇಲ್ಬಾಗದಲ್ಲಿ ಎರಡು ಗೆರೆಗಳ ನಡುವೆ ಅಂತರ ಕಾಣಿಸುತ್ತದೆ.
  8. ನನ್ನ ಬಳಿ ಇರುವ ದಾಖಲೆಯಲ್ಲಿರುವ ಐ ಅಕ್ಷರದ ಮೇಲ್ಬಾಗದಲ್ಲಿ ಚುಕ್ಕಿ ಇರುವುದು ಕಂಡು ಬರುವುದಿಲ್ಲ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿರುವ ಐ ಅಕ್ಷರದ ಮೇಲ್ಬಾಗದಲ್ಲಿ ಚುಕ್ಕಿ ಇರುವುದು ಕಂಡುಬರುತ್ತದೆ ಎಂದು ಅವರು ತಿಳಿಸಿದ್ದಾರೆ.
  9. ನನ್ನ ಬಳಿ ಇರುವ ದಾಖಲೆಯಲ್ಲಿನ ಎರಡನೇ ಗುಟದ ಎಡಭಾಗದಲ್ಲಿ ಟ್ಯಾಗ್ ಹಾಕಿರುವ ಗುರುತು ಕಾಣಿಸಿದರೆ, ಸೃಷ್ಟಿಸಿರುವ ದಾಖಲೆಯ ಬಲಭಾಗದಲ್ಲಿ ಟ್ಯಾಗ್ ಗುರುತು ಕಾಣಿಸುತ್ತದೆ.

    ಈ ಮೇಲ್ಕಂಡಂತೆ ಒಟ್ಟು ಒಂಬತ್ತು ಪ್ರಮುಖ ವ್ಯತ್ಯಾಸಗಳು ಕಂಡುಬರುತ್ತವೆ ಎಂದು ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap