ಧ್ವನಿ ಇಲ್ಲದವರ ಧ್ವನಿ ಪ್ರಜಾಪ್ರಗತಿ -ಪ್ರಗತಿ ವಾಹಿನಿ

  ತುಮಕೂರು :

      ಧ್ವನಿ ಇಲ್ಲದವರ ಧ್ವನಿಯಾಗಿ ಪ್ರಜಾಪ್ರಗತಿ -ಪ್ರಗತಿ ವಾಹಿನಿ ಕಾರ್ಯನಿರ್ವಹಿಸುವ ಮೂಲಕ ಮಾಧ್ಯಮ ಕ್ಷೇತ್ರಗಳಲ್ಲಿ ಮೌಲ್ಯಗಳ ಉಳಿವಿಗೆ ಕಾರಣವಾಗಿದೆ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಬಣ್ಣಿಸಿದರು.

      ಪ್ರಗತಿ ವಾಹಿನಿ 6ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿ ಆಶೀರ್ವಚನ ನೀಡಿದ ಶ್ರೀಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾಧ್ಯಮ ರಂಗ ಹಲವು ಸವಾಲು, ಕವಲು ದಾರಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಚ್ಚುಮೊಳೆಯಿಂದ ಡಿಜಿಟಲ್ ಮಾಧ್ಯಮದವರಿಗೆ ಪತ್ರಿಕೆ ಮತ್ತು ವಾಹಿನಿ ಎರಡನ್ನು ಬೆಳೆಸಿ ಸಮಾಜದಲ್ಲಿ ನಿಕೃಷ್ಟವಾಗಿರುವವರ ಪರವಾಗಿ ಧ್ವನಿ ಎತ್ತುವ ಕಾರ್ಯ ಮಾಡುತ್ತಿರುವ ಸಂಪಾದಕ ಎಸ್.ನಾಗಣ್ಣ, ಸಹ ಸಂಪಾದಕ ಟಿ.ಎನ್.ಮಧುಕರ್, ಪ್ರಗತಿ ವಾಹಿನಿ ಸಿಇಒ ಟಿ.ಎನ್.ಶಿಲ್ಪಶ್ರೀ ಹಾಗೂ ಸಿಬ್ಬಂದಿಗಳ ಪರಿಶ್ರಮ ಶ್ಲಾಘನೀಯವಾದದು. ಪತ್ರಿಕೆ ಗಳಿಸಿರುವ ವಿಶ್ವಾಸಾರ್ಹತೆ ಇನ್ನೂ ಹೆಚ್ಚಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಗತಿಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವಂತಾಗಲಿ ಎಂದು ಆಶಿಸಿದರು.

      ಪಾವಗಡದಂತಹ ಗಡಿ ಪ್ರದೇಶದಲ್ಲಿ ನೆಲೆಯಾಗಿ 32,000 ಕಣ್ಣಿನ ಶಸ್ತ್ರಚಿಕಿತ್ಸೆ ನೆರವೇರಿಸಿ, ಗ್ರಾಮೀಣ ಆರೋಗ್ಯ ಸೇವೆಯನ್ನು ರಾಮಕೃಷ್ಣ ಆಶ್ರಮದ ಮೂಲಕ ಮಾಡುತ್ತಿದ್ದು, ದೀನದಲಿತರ ಸೇವೆಯಲ್ಲಿ ಪಾರಮಾರ್ಥಿಕ ಆನಂದ ಕಾಣುತ್ತಿದ್ದೇವೆ. ರಾಜಧಾನಿಯಲ್ಲೆ ಮಹಾನಗರದಲ್ಲಿ ಇಂತಹ ಸೇವೆ ಮಾಡಿದ್ದರೆ ವಿಶ್ವಮಟ್ಟದ ಪ್ರಚಾರವಾಗುತಿತ್ತು. ಆದರೆ ಪ್ರಚಾರಕ್ಕಿಂತ ಸೇವೆಗೈಯ್ಯುವುದು ಮುಖ್ಯ. ಹಾಗೆಯೇ ವಾಹಿನಿಯವರು ಟಿಆರ್‍ಪಿ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಬದುಕಲ್ಲಿ ದಲಾವಣೆ ತರುವ ಸದಬಿರುಚಿಯ ಕಾರ್ಯಕ್ರಮಗಳಿಗೆ ಒತ್ತುಕೊಡುವಂತೆ ಸಲಹೆ ನೀಡಿ, ವಾಹಿನಿ ರಜತ ಮಹೋತ್ಸವ, ಸುವರ್ಣ ಮಹೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.

      ಸಂಕ್ರಮಣ ಸ್ಥಿತಿಯಲ್ಲಿ ಮಾಧ್ಯಮ:

      ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಪತ್ರಿಕಾರಂಗ ಹಾಗೂ ಮಾಧ್ಯಮ ಕ್ಷೇತ್ರ ಸಂಕ್ರಮಣ ಸ್ಥಿತಿ ತಲುಪಿದೆ. ವೃತ್ತಿನಿರತರದಲ್ಲಿ ಮೌಲ್ಯಗಳು ಅಪಮೌಲ್ಯವಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಪತ್ರಿಕೆಯ ದಿಟ್ಟ ಪತ್ರಕರ್ತರಾಗಿದ್ದ ದಿ.ಕೋಟೆನಾಗಭೂಷಣ್ ಸರಕಾರದ ಕೋಟಿ ಕೋಟಿ ಅನುದಾನವನ್ನು ತಮ್ಮ ವರದಿಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಸಂಗತಿಗಳು ನೆನಪಾಗುತ್ತವೆ. ಹಲವು ಸವಾಲುಗಳನ್ನು ಎದುರಿಸಿ ಪತ್ರಿಕೆ, ವಾಹಿನಿಯನ್ನು ಮುನ್ನೆಡೆಸುತ್ತಿರುವುದರ ಹಿಂದೆ ನಮ್ಮೆಲ್ಲ ಓದುಗರು, ವೀಕ್ಷಕರು, ಜಾಹೀರಾತುದಾರರು, ಸಿಬ್ಬಂದಿ, ಗುರು-ಹಿರಿಯರ ಶುಭಾಶೀರ್ವಾದಗಳು ಕಾರಣ ಎಂದು ಸ್ಮರಿಸಿದರು.

      ಸಂಪನ್ಮೂಲ ವ್ಯಕ್ತಿಗಳು, ಪ್ರೋತ್ಸಾಹಕರಿಗೆ ಗೌರವ ಸಮರ್ಪಣೆ:

     ವಾರ್ಷಿಕೋತ್ಸವ ಸಮಾರಂಭದಲ್ಲಿ ವಾಹಿನಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಿರಂತರ ಕಾರ್ಯಕ್ರಮ ನಡೆಸಿಕೊಟ್ಟಿರುವ ಸಿ.ಸಿ.ಪಾವಟೆ, ರವೀಂದ್ರನಾಥ ಠ್ಯಾಗೂರ್, ಎಂ.ಕೆ.ನಾಗರಾಜರಾವ್, ಪ್ರೊ.ಕೆ.ಚಂದ್ರಣ್ಣ, ಪ್ರಸನ್ನಮೂರ್ತಿ ಸಂಗೀತ ಶ್ರೀನಿವಾಸ್, ವಿ.ಜಿ.ಲೋಕೇಶ್ ಹಾಗೂ ಪ್ರೋತ್ಸಾಹಕರಾದ ಸುಜಯ್ ಪಾಯಸ್, ಜೀನಿ ಹೆಲ್ತ್ ಮಿಕ್ಸ್‍ನ ಜಗದೀಶ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸಿ.ಸಿ.ಪಾವಟೆ, ರವೀಂದ್ರನಾಥ ಠ್ಯಾಗೂರ್ ಪ್ರಸನ್ನಮೂರ್ತಿ ಹಾಗೂ ಸುಜಯ್‍ಪಾಯಸ್ ಅನಿಸಿಕೆ ವ್ಯಕ್ತಪಡಿಸಿ ವಾಹಿನಿಯ ಗುಣಮಟ್ಟದ ಕಾರ್ಯಕ್ರಮ, ಅವಕಾಶಗಳಿಗೆ ಮೆಚ್ಚುಗೆ ಸಲ್ಲಿಸಿದರು. ಶಿಲ್ಪಶ್ರೀ ಆಫ್‍ಸೆಟ್ ಪ್ರಿಂಟರ್ಸ್ ಮಾಲೀಕರಾದ ಶಾರದಾನಾಗಣ್ಣ, ಸಹ ಸಂಪಾದಕರಾದ ಟಿ.ಎನ್.ಮಧುಕರ್ ವೇದಿಕೆಯಲ್ಲಿದ್ದರು. ಹಿರಿಯ ವ್ಯವಸ್ಥಾಪಕರಾದ ದಿಶಾ ಪ್ರಾರ್ಥಿಸಿದರು. ವಾಹಿನಿ ಸಿಇಒ ಟಿ.ಎನ್.ಶಿಲ್ಪಶ್ರೀ ಸ್ವಾಗತಿಸಿದರು.

      ಸಾ.ಚಿ.ರಾಜ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಹರೀಶ್ ಆಚಾರ್ಯ ವಂದಿಸಿದರು. ಹೇಮಂತ್ ಮತ್ತು ತಂಡ ಕಾರ್ಯಕ್ರಮ ನಿರ್ವಹಿಸಿದರು. ರೆಡ್‍ಕ್ರಾಸ್ ಜಿಲ್ಲಾ ಛೇರ್ಮನ್ ಎಚ್.ಜಿ.ಚಂದ್ರಶೇಖರ್, ನಿರ್ದೇಶಕರಾದ ಸಾಗರನಹಳ್ಳಿ ಪ್ರಭು, ಪ್ರಾಚಾರ್ಯೆ ಡಾ.ಲೀಲಾಲೇಪಾಕ್ಷಿ, ಪ್ರಧಾನ ವ್ಯವಸ್ಥಾಪಕರಾದ ಚಿಕ್ಕೀರಪ್ಪ ಸೇರಿದಂತೆ ಹಲವು ಗಣ್ಯರು, ಸಿಬ್ಬಂದಿ ವರ್ಗದವರು ಪಾಲ್ಗೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap