ಬೆಂಗಳೂರು
ಸಿನಿಮಾ ರಂಗಕ್ಕೆ ಮಗನನ್ನು ಅದ್ಧೂರಿಯಾಗಿ ಪರಿಚಯಿಸಿದ ಬೆನ್ನಲ್ಲೇ ಪುತ್ರನ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಈ ಮಧ್ಯೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಡರಾತ್ರಿ ಜ್ಯೋತಿಷಿವೋರ್ವರನ್ನು ಗುಪ್ತವಾಗಿ ಭೇಟಿ ಮಾಡಿ ಶಾಸ್ತ್ರ ಕೇಳಿರುವ ಮಾಹಿತಿ ಲಭ್ಯವಾಗಿದೆ.
ನಿನ್ನೆ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಇಡೀ ದಿನ ಎಲ್ಲಿಯೂ ಕಾಣಿಸಿಕೊಳ್ಳದೆ, ಚುನಾವಣಾ ಸಭೆಗಳನ್ನೂ ಮಾಡದೇ ಒಂದು ರೀತಿಯ ಮೌನದಲ್ಲಿದ್ದ ಸಿಎಂ ಕುಮಾರಸ್ವಾಮಿ ರಾತ್ರಿ 10 ರ ಸುಮಾರಿಗೆ ಜ್ಯೋತಿಷಿಯನ್ನು ಭೇಟಿ ಮಾಡಿದ್ದರು.
ನಗರದ ಸಿಬಿಐ ರಸ್ತೆ ಬಳಿ ಇರುವ ಜ್ಯೋತಿಷಿ ದ್ವಾರಕನಾಥ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ, ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು ಎಂದು ತಿಳಿದು ಬಂದಿದೆ. ವಿಶೇಷವಾಗಿ ಮಂಡ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ.
ಮಂಡ್ಯದಲ್ಲಿ ಪುತ್ರ ನಿಖಿಲ್ ಕಣಕ್ಕಿಳಿಸುತ್ತಿರುವ ಕುಮಾರಸ್ವಾಮಿ ಅವರು, ಸುಮಲತಾ ಅಂಬರೀಶ್ ಸಹ ಸ್ಪರ್ಧೆಗೆ ನಿರ್ಧರಿಸಿರುವುದರಿಂದ ಗೊಂದಲಕ್ಕೆ ಸಿಲುಕಿದ್ದಾರೆ. ಪ್ರಸಕ್ತ ರಾಜಕೀಯ ಗೊಂದಲದಿಂದಾಗಿ ಪುತ್ರನ ರಾಜಕೀಯ ಅದೃಷ್ಟ ಕುರಿತು ಶಾಸ್ತ್ರ ಕೇಳಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಈವರೆಗೂ ಮೈತ್ರಿ ಸರ್ಕಾರದ ಲೆಕ್ಕಾಚಾರದ ಪ್ರಕಾರ ಮಂಡ್ಯ ಜೆಡಿಎಸ್‍ಗೆ ಸಿಗಲಿದ್ದು ಕಾಂಗ್ರೆಸ್ ಬೆಂಬಲ ನೀಡಲಿದೆ. ಹೀಗಾಗಿ ಪುತ್ರ ಅನಾಯಾಸವಾಗಿ ಲೋಕಸಭೆಗೆ ಪ್ರವೇಶಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದಂತಾಗಲಿದೆ ಎನ್ನುವುದು ಸಿಎಂ ಲೆಕ್ಕಾಚಾರವಾಗಿತ್ತು. ಆದರೆ ಸುಮಲತಾ ಅಂಬರೀಶ್ ಸ್ಪರ್ಧೆ ಸಿಎಂ ನಿದ್ದೆಗೆಡಿಸಿದ್ದು ಪುತ್ರನ ಜಾತಕ ಹಿಡಿದು ಶಾಸ್ತ್ರ ಕೇಳಿದ್ದಾರೆ.
ಬಹಳಷ್ಟು ರಾಜಕೀಯ ನಾಯಕರಿಗೆ ಆಪ್ತರಾಗಿರುವ ಜ್ಯೋತಿಷಿ ದ್ವಾರಕನಾಥ್ ಬಳಿ ಸಾಕಷ್ಟು ನಾಯಕರು ಶಾಸ್ತ್ರ ಕೇಳಿ ಅದರಂತೆ ನಡೆದುಕೊಂಡು ರಾಜಕೀಯದಲ್ಲಿ ಏಳಿಗೆ ಸಾಧಿಸಿದ್ದಾರೆ. ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಹೆಚ್‍ಡಿಕೆ ಜ್ಯೋತಿಷಿಗಳನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಜ್ಯೋತಿಷಿ ದ್ವಾರಕನಾಥ್ ಅವರು ಸಿಎಂಗೆ ಮಂಡ್ಯ ರಾಜಕೀಯದಲ್ಲಿ ಏನಾಗಲಿದೆ ಎಂಬುದರ ಕುರಿತು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಸದ್ಯ ಗೌಪ್ಯವಾಗಿಡಲಾಗಿದೆ.
ಒಟ್ಟಿನಲ್ಲಿ ಪುತ್ರನ ರಾಜಕೀಯ ಪ್ರವೇಶಕ್ಕೆ ಮುಂದಾಗಿರುವ ಸಿಎಂ ಕುಮಾರಸ್ವಾಮಿ ಆತಂಕಕ್ಕೆ ಸಿಲುಕಿದ್ದಾರೆ ಎನ್ನುವುದು ಜ್ಯೋತಿಷಿ ಭೇಟಿಯಿಂದ ಸ್ಪಷ್ಟವಾಗಿದ್ದು, ಸಿಎಂ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
