ಚಂಡೀಗಢ:
ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹದಲ್ಲಿರುವಂತೆಯೇ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ. ಪಕ್ಷದ ಹಿರಿಯ ನಾಯಕಿ ಕಿರಣ್ ಚೌಧರಿ ಹಾಗೂ ಆಕೆಯ ಪುತ್ರಿ ಶೃತಿ ಚೌಧರಿ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಈ ಬೆಳವಣಿಗೆಯನ್ನು ದೃಢಪಡಿಸಿರುವ ಹಾಲಿ ಶಾಸಕಿ ಕಿರಣ್ ಚೌಧರಿ, ಕಾಂಗ್ರೆಸ್ ಪಕ್ಷ ತೊರೆದು ಬುಧವಾರ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಆಕೆಯ ಪುತ್ರಿ, ಮಾಜಿ ಸಂಸದೆ ಶೃತಿ ಚೌಧರಿ ಹರಿಯಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದಾರೆ.
ಹರಿಯಾಣದ ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್ ಅವರ ಸೊಸೆ ಕಿರಣ್ ಚೌಧರಿ, ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರೊಂದಿಗೆ ಭಿನ್ನಮತಹೊಂದಿದ್ದು, ಇತ್ತೀಚೆಗೆ ಲೋಕಸಭೆ ಚುನಾವಣೆ ಮುಗಿದ ನಂತರ ಭಿವಾನಿ-ಮಹೇಂದ್ರಗಢ ಕ್ಷೇತ್ರದಿಂದ ಶ್ರುತಿ ಚೌಧರಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ ಧರಂಬೀರ್ ಸಿಂಗ್ ವಿರುದ್ಧ ಸೋತ ಹಾಲಿ ಶಾಸಕ ಹಾಗೂ ಹೂಡಾ ನಿಷ್ಠಾವಂತ ರಾವ್ ದಾನ್ ಸಿಂಗ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದೇ ಕಾರಣಕ್ಕೆ ಅಸಮಾಧಾನಗೊಂಡಿರುವ ಕಿರಣ್ ಚೌಧರಿ ಮತ್ತು ಶ್ರುತಿ ಬುಧವಾರ ದೆಹಲಿಯಲ್ಲಿ ಬಿಜೆಪಿ ಸೇರುತ್ತಿರುವುದಾಗಿ ಅವರು ತಿಳಿಸಿದ್ದಾರೆ.