ನವದೆಹಲಿ:
ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಫ್ರಾಂಚೈಸಿಯ ಮಾಲೀಕರಾಗಿರುವ ಎನ್.ಶ್ರೀನಿವಾಸನ್ ಅಂಪೈರ್‌ಗಳನ್ನೇ ಫಿಕ್ಸ್ ಮಾಡುತ್ತಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಯೂಟ್ಯೂಬರ್ ರಾಜ್ ಸಮಾನಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಲಲಿತ್ ಮೋದಿ, ‘ನಾನು ಐಪಿಎಲ್ ಅಧ್ಯಕ್ಷನಾಗಿದ್ದ ಚೆನ್ನೈ ಮಾಲಿಕರಾದ ಶ್ರೀನಿವಾಸನ್ ತಮಗೆ ಬೇಕಾದ ಹಾಗೆ ಪಂದ್ಯಗಳಿಗೆ ಅಂಪೈರ್‌ಗಳನ್ನು ಬದಲಿಸುತ್ತಿದ್ದರು. ಇದನ್ನು ಬಹಿರಂಗಗೊಳಿಸಲು ಮುಂದಾದಾಗ ಶ್ರೀನಿವಾಸನ್ ನನ್ನ ವಿರುದ್ಧವೇ ತಿರುಗಿ ಬಿದ್ದಿದ್ದರುʼ ಎಂದರು. ಫಿಕ್ಸಿಂಗ್‌ನಲ್ಲಿ ಸಿಲುಕಿ 2016 ಮತ್ತು 2017ರ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು 2 ವರ್ಷಗಳ ನಿಷೇಧ ಶಿಕ್ಷೆಗೆ ಒಳಪಡಿಸಲಾಗಿತ್ತು.
ಪಂದ್ಯದಲ್ಲಿ ಅಂಪೈರ್‌ಗಳನ್ನು ಮಾತ್ರವಲ್ಲದೆ ಹರಾಜಿನಲ್ಲಿಯೂ ಫಿಕ್ಸಿಂಗ್ ನಡೆಯುತ್ತಿತ್ತು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ. ‘ಹರಾಜಿನಲ್ಲಿಯೂ ಶ್ರೀನಿವಾಸನ್ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಬೇರೆ ಫ್ರಾಂಚೈಸಿಯವರು ಖರೀದಿ ಮಾಡದಂತೆ ಫಿಕ್ಸಿಂಗ್ ಮಾಡುತ್ತಿದ್ದರು. ಇಂಗ್ಲೆಂಡ್‌ನ ಫ್ಲಿಂಟಾಪ್ ಅವರನ್ನು ಖರೀದಿಸಲು ಶ್ರೀನಿವಾಸನ್ ನಿರ್ಧರಿಸಿದ್ದರು. ಹೀಗಾಗಿ ಫ್ಲಿಂಟಾಫ್‌ಗೆ ಹರಾಜಿನಲ್ಲಿ ಬೇರೆ ಯಾವುದೇ ಬಿಡ್ ಮಾಡದಂತೆ ನೋಡಿಕೊಳ್ಳಲಾಗಿತ್ತುʼ ಎಂದು ಲಲಿತ್ ಆರೋಪಿಸಿದ್ದಾರೆ.