ವಿರೋಧ ಪಕ್ಷಗಳು ಎಷ್ಟೋ ಮನೆ ಮುರಿಯುವ ಕೆಲಸ ಮಾಡಿವೆ: ಡಿಸಿಎಂ

ಬೆಂಗಳೂರು:

    “ನಾವು ಜಾರಿಗೆ ತಂದಿರುವ ಜನಪರ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರಿಂದ ಮಾಡಲು ಆಗಲಿಲ್ಲ.ಅಕ್ಕ-ತಂಗಿ, ತಂದೆ-ಮಗ, ಅಪ್ಪ-ಮಕ್ಕಳ ನಡುವೆ ಜಗಳ ತಂದಿಟ್ಟು, ಭಾವನೆಗಳ ಮೇಲೆ ಆಟವಾಡುವುದೇ ಅವುಗಳ ಕೆಲಸ. ಹೀಗೆ ಮಾಡಿ ಎಷ್ಟೋ ಮನೆಗಳನ್ನು ಒಡೆದು ಹಾಕಿವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.ಕಂಠೀರವ ಸ್ಟೇಡಿಯಂ ಬಳಿ ಮಾಧ್ಯಮಗಳಿಗೆ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

   ಮಲ್ಲಿಕಾರ್ಜುನ ಖರ್ಗೆ ಅವರು ಗ್ಯಾರಂಟಿ ವಿಚಾರವಾಗಿ ಗುರವಾರ ಪ್ರಸ್ತಾಪಿಸಿದ ಮಾತುಗಳ ಬಗ್ಗೆ ಕೇಳಿದಾಗ, “ವಿರೋಧ ಪಕ್ಷದವರಿಗೆ ರಾಜಕೀಯ ಹೊರತಾಗಿ ಯಾವ ವಿಚಾರಗಳೂ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಸಂಸಾರಗಳನ್ನು ಹಾಳು ಮಾಡುತ್ತವೇ ಎಂದು ಹೇಳಿದ್ದರು. ಆದರೆ ಅವರು ಹೇಳಿದಂತೆ ಆಗಲಿಲ್ಲ. ನಮ್ಮ ಕೆಲಸಗಳನ್ನು ನೋಡಿ, ಹೊಟ್ಟೆಕಿಚ್ಚು ಪಡುತ್ತಿದ್ದಾರೆ” ಎಂದರು. “ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಅವರು ಬುದ್ಧಿಮಾತು ಹೇಳಿದರೆ ನಾವು ಕೇಳಬೇಕು. ನಾನು ಶಕ್ತಿ ಯೋಜನೆ ವಿಚಾರವಾಗಿ ಹೇಳಿರುವ ಮಾತುಗಳನ್ನು ಮತ್ತೊಮ್ಮೆ ಎಲ್ಲರು ಕೇಳಿಸಿಕೊಂಡು ನೋಡಿ” ಎಂದರು. 

  “ಶಕ್ತಿ ಯೋಜನೆ ಕುರಿತು ಶೇ. 5-10 ರಷ್ಟು ಮಹಿಳೆಯರ ಅಭಿಪ್ರಾಯಗಳನ್ನು ನಾನು ಹೇಳಿದನೇ ಹೊರತು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಒಂದಷ್ಟು ಜನ ಮಹಿಳೆಯರು ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರೂ ಬಸ್ ನಿರ್ವಾಹಕರು ಹಣ ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದೆ ಅಷ್ಟೇ” ಎಂದು ಸ್ಪಷ್ಟಪಡಿಸಿದರು. 

   ಮಲ್ಲಿಕಾರ್ಜುನ ಖರ್ಗೆ ಅವರು ಒಗ್ಗಟ್ಟಾಗಿ ಇರಿ ಎನ್ನುವ ಸಂದೇಶ ಕೊಟ್ಟಿದ್ದು ಯಾವ ಕಾರಣಕ್ಕೆ ಎಂದು ಕೇಳಿದಾಗ, “ಅವರು ವಿವಿಧ ಸಂದರ್ಭಗಳನ್ನು ವಿವರಿಸಿ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ. ನಾನು ಅಧ್ಯಕ್ಷನಾದ ಹಾಗೂ ಡಿಸಿಎಂ ಆದ ನಂತರ ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಿವೆಯೇ? ನಾವುಗಳು ಅಚ್ಚುಕಟ್ಟಾಗಿ ಸರ್ಕಾರ ಹಾಗೂ ಪಕ್ಷವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ” ಎಂದರು.

   ಒಂದಷ್ಟು ನಾಯಕರು ದೆಹಲಿಗೆ ಬಂದು ಭೇಟಿ ಮಾಡುತ್ತಿರುವ ಬಗ್ಗೆ ಖರ್ಗೆ ಅವರು ಪ್ರಸ್ತಾಪಿಸಿದ ಬಗ್ಗೆ ಕೇಳಿದಾಗ, “ಯಾರೂ ದೆಹಲಿಗೆ ತೆರಳಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ವಿಚಾರದಲ್ಲೂ ಮಧ್ಯಪ್ರವೇಶ ಮಾಡಿಲ್ಲ. ಇದುವರೆಗೂ ಇಂತಹ ಘಟನೆ ನಡೆದಿಲ್ಲ. ಅವರು ಹಿರಿಯರಾಗಿ ಸಲಹೆ ನೀಡಿದ್ದಾರೆ. ರಾಷ್ಟ್ರ ರಾಜಕಾರಣದ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ್ದಾರೆ. ಮೀಸಲಾತಿ ವಿಚಾರವಾಗಿ ಒಂದೊಂದು ರಾಜ್ಯ ಒಂದೊಂದು ನೀತಿ ಅಳವಡಿಸಿಕೊಂಡಿವೆ. ಸ್ಥಳೀಯವಾಗಿ ನಿಮ್ಮ ನೀತಿಯನ್ನು ನೀವು ನಿರೂಪಿಸಿಕೊಳ್ಳಿ. ಅದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಅವರು ಹೇಳಿದ್ದಾರೆ” ಎಂದರು. 

   ಮಹಾರಾಷ್ಟ್ರದಲ್ಲಿಯೂ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಕೇಳಿದಾಗ, “ಕರ್ನಾಟಕ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು, ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿವೆ. ಬಿಜೆಪಿ ಹಾಗೂ ಇತರೇ ಪಕ್ಷಗಳ ಆಡಳಿತವಿರುವ ರಾಜ್ಯಗಳು ಸಹ ನಮ್ಮದೇ ಯೋಜನೆಗಳನ್ನು ಅನುಕರಿಸಿವೆ. ಇದು ನಮಗೆ ಹೆಮ್ಮೆ ಹಾಗೂ ಗರಿಮೆಯ ವಿಚಾರ” ಎಂದು ಹೇಳಿದರು. 

   ವಕ್ಫ್ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಧಾನಿಗೆ ಪತ್ರ ಬರೆದಿರುವ ವಿಚಾರ ಕೇಳಿದಾಗ, “ಮಾನಸಿಕವಾಗಿ ಅಸ್ವಸ್ಥರಾಗಿರುವ, ಹುಚ್ಚಾಸ್ಪತ್ರೆ ಸೇರಬೇಕಿರುವ ವ್ಯಕ್ತಿಗಳ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದರು. 

   “ಕರ್ನಾಟಕ ಏಕೀಕರಣಗೊಂಡು 69 ವರ್ಷ ಹಾಗೂ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದೇವೆ. ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಹಾಗೂ ಇತರ ಕಾರ್ಯಕ್ರಮ ನೀಡಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಬೇಕು ಎಂದು ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕನ್ನಡ ನಾಡಿಗಾಗಿ ಶಾಲಾ ಮಕ್ಕಳು ಶ್ರಮಪಟ್ಟು ಕಾರ್ಯಕ್ರಮ ಮಾಡಿರುತ್ತಾರೆ” ಎಂದು ತಿಳಿಸಿದರು.

  “ಈ ಬಾರಿ ರಾಜ್ಯೋತ್ಸವ ಕಾರ್ಯಕ್ರಮ ಮಾಡುವಂತೆ ಎಲ್ಲಾ ಖಾಸಗಿ ಸಂಸ್ಥೆಗಳು ಹಾಗೂ ವಿದ್ಯಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿತ್ತು. ಶೇಕಡಾ 70 ರಷ್ಟು ಸಂಸ್ಥೆಗಳು ಈ ಕಾರ್ಯಕ್ರಮ ಮಾಡಿವೆ. ಸರ್ಕಾರದ ವತಿಯಿಂದ ಮೊದಲ ಹಂತದಲ್ಲಿ ಈ ಆದೇಶ ನೀಡಿದ್ದೇವೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಷೆ ಹಾಗೂ ಸಂಸ್ಕೃತಿ ಕಾಪಾಡಿಕೊಂಡು ಹೋಗಲು ಸೂಚಿಸಿದ್ದೆವು. ಖಾಸಗಿ ಸಂಸ್ಥೆಗಳ ವಿರುದ್ಧ ಕಾನೂನು ಕೈಗೆತ್ತಿಕೊಳ್ಳದಂತೆ ನಾವು ನಿರ್ದೇಶನ ನೀಡಿದ್ದೆವು” ಎಂದರು.

   ಕನ್ನಡಕ್ಕೆ ಅಪಮಾನ ಮಾಡುವವರ ವಿರುದ್ಧ ನಾಡದ್ರೋಹದ ಕಾನೂನು ಕ್ರಮ ಕೈಗೊಳ್ಳುವ ಕಾಯ್ದೆ ತರಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ನಮ್ಮ ರಾಜ್ಯದಲ್ಲಿ ಬೇರೆ ದೇಶ ಹಾಗೂ ರಾಜ್ಯಗಳ ಜನ ಬಂದು ಬದುಕು ನಡೆಸುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ಅದರಲ್ಲೂ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಬಹಳ ಶ್ರದ್ಧೆಯಿಂದ ರಾಜ್ಯೋತ್ಸವವನ್ನು ಆಚರಣೆ ಮಾಡಿವೆ” ಎಂದು ಹೇಳಿದರು.

Recent Articles

spot_img

Related Stories

Share via
Copy link