ದೆಹಲಿ ವಿಧಾನಸಭಾ ಚುನಾವಣೆ 2025: ರಾಷ್ಟ್ರಪತಿ ದ್ರೌಪದಿ ಮುರ್ಮು, ಸಿಎಂ ಅತಿಶಿ ಮತದಾನ

ನವದೆಹಲಿ:

   ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಈ ವರೆಗೂ ಶೇ.19.95ರಷ್ಟು ಮತದಾನವಾಗಿದೆ.ರಾಷ್ಟ್ರ ರಾಜಧಾನಿಯಲ್ಲಿಂದು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬೆಳ್ಳಂಬೆಳಗ್ಗೆ ಕೊರೆವ ಚಳಿಯನ್ನೂ ಲೆಕ್ಕಿಸದೇ ಮತದಾರರು ಉತ್ಸಾಹದಿಂದಲೇ ಹಕ್ಕು ಚಲಾಯಿಸುತ್ತಿದ್ದಾರೆ.

  ಅಂತೆಯೇ ಲೋಕಸಭೆ ವಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.ಇದರಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ಆಪ್‌ ನಾಯಕ ಮನೀಶ್‌ ಸಿಸೋಡಿಯಾ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ನಾಯಕರು ಮತ ಚಲಾಯಿಸಿದ್ದಾರೆ.

   ದೆಹಲಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಸಂಜೆ 6:30 ಗಂಟೆವರೆಗೂ ನಡೆಯಲಿದೆ. 1.56 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ.

   ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ, 27 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಬಿಜೆಪಿ ಹಾಗೂ 10 ವರ್ಷಗಳ ಬಳಿಕ ಅಧಿಕಾರದ ಗುರಿಯಲ್ಲಿ ಕಾಂಗ್ರೆಸ್ ಇದೆ.

   ಈ ನಡುವೆ ತಮ್ಮ ಮತಹಕ್ಕು ಚಲಾಯಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಅವರು, ಇಲ್ಲಿಯವರೆಗೆ ವಾತಾವರಣ ನಮ್ಮ ಪರ ಇದೆ. ಜನರು ಬುದ್ಧಿವಂತರು. ಅವರು ನಿಂದನೀಯ ಭಾಷೆಗಳಿಗೆ ಅಥವಾ ಹಣಕ್ಕೆ ಮತ ಚಲಾಯಿಸುವುದಿಲ್ಲ. ಜನರು ಮತ ಚಲಾಯಿಸಲು ಹೋದಾಗ, ಅವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆಲಸ ಮಾಡುವ ಪಕ್ಷವನ್ನು ಪರಿಗಣಿಸುತ್ತಾರೆ. ಬಿಜೆಪಿ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಿದೆ ಎಂದು ಜನರಿಗೆ ಖಚಿತವಾಗಿದೆ. 6 ತಿಂಗಳ ಹಿಂದೆ ಜೈಲಿನಿಂದ ಹೊರಬಂದಾಗ ಬಳಿಕ ನಾನು ಮತ್ತು ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದೇವೆ. ನ್ಯಾಯಾಲಯ ನಮ್ಮನ್ನು ಬಿಡುಗಡೆ ಮಾಡಿದೆ. ಆದರೆ ದಿಲ್ಲಿಯ ಜನರು ಮನೀಶ್ ಸಿಸೋಡಿಯಾ ಪ್ರಾಮಾಣಿಕರೇ ಅಥವಾ ಅಲ್ಲವೇ ಎಂದು ನಿರ್ಧರಿಸಬೇಕು ಎಂದು ಹೇಳಿದ್ದಾರೆ.

  ದೆಹಲಿ ಸಿಎಂ ಅತಿಶಿ ಅವರು ಮಾತನಾಡಿ, ದೆಹಲಿಯ ಜನರು ಬದಲಾವಣೆ ಮತ್ತು ಅಭಿವೃದ್ಧಿ ಬಯಸಿದ್ದಾರೆ. ಆ ಬದಲಾವಣೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ 10 ವರ್ಷಗಳಲ್ಲಿ ದೆಹಲಿಯನ್ನು ಹೇಗೆ ಅಭಿವೃದ್ಧಿಹೀನ ಮಾಡಲಾಗಿದೆ ಎಂಬುದು ಕಣ್ಣಮುಂದಿದೆ. ದೆಹಲಿಯ ಮತದಾರರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ, ಬದಲಾವಣೆಗಾಗಿ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

 

Recent Articles

spot_img

Related Stories

Share via
Copy link