ಬೆಂಗಳೂರು:
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ನಗರಪಾಲಿಕೆ, ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆಗಳ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರೂ ಕೈಜೋಡಿಸಿದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಭೂ ಪರಿವರ್ತನೆ ಮತ್ತು ಒಣಭೂಮಿ ನಿರ್ವಹಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯ ಪರಿಸರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಪ್ರತಿಯೊಬ್ಬರೂ ನಿಸರ್ಗವನ್ನು ಪ್ರೀತಿಸಿ ರಕ್ಷಿಸಬೇಕು. ಇದೊಂದು ಕಷ್ಟದ ಕೆಲಸವೇನಲ್ಲ ಆದರೆ ಎಲ್ಲರೂ ಮನಸ್ಸು ಮಾಡಬೇಕು ಎಂದು ತಿಳಿಸಿದರು.
ಪ್ರತಿದಿನವೂ ಪರಿಸರ ದಿನವನ್ನಾಗಿ ಆಚರಿಸುವ ಪ್ರವೃತ್ತಿ ಅಗತ್ಯ. ತಾಜ್ಯಗಳ ಸೂಕ್ತ ವಿಲೇವಾರಿ, ಮಳೆ ನೀರು ಕೊಯ್ಲು ಮುಂತಾದ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಅನುಕೂಲ. ಎಲ್ಲರೂ ಪರಿಸರ ಪ್ರೇಮಿಗಳಾಗಿ ನೈರ್ಮಲ್ಯ ಕಾಪಾಡಿಕೊಳ್ಳೋಣ. ತಿಯೊಬ್ಬರೂ ಪಾಲ್ಗೊಂಡರೆ ಮಾತ್ರ ಪರಿಸರವನ್ನು ಸಂರಕ್ಷಣೆ ಮಾಡಲು ಸಾಧ್ಯ. ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಈ ನಿಟ್ಟಿನಲ್ಲಿ ಕೈಜೋಡಿಸಬೇಕು.
ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಸಂರಕ್ಷಣೆಯ ಲಾಭಗಳೇನು ಎಂದು ತಿಳಿಸಿ ವಿದ್ಯಾರ್ಥಿಗಳು ಪರಿಸರ, ಕಾಡು, ಜನಜೀವನ, ಪ್ರಾಣಿ ಸಂಕುಲಗಳ ಬಗ್ಗೆ ಅರಿತುಕೊಳ್ಳಬೇಕು. ಮನುಷ್ಯರು ಬದುಕುವಂತೆ ಪ್ರಾಣಿ ಸಂಕುಲಕ್ಕೂ ಬದುಕುವ ಹಕ್ಕಿದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಆರೋಗ್ಯಕ್ಕೂ ನೈರ್ಮಲ್ಯಕ್ಕೂ ನೇರ ಸಂಬಂಧವಿದೆ. ಸ್ವಚ್ಛತೆ ಇದ್ದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಶುದ್ಧ ಕುಡಿಯುವ ನೀರು ಸರಬರಾಜು ಸರ್ಕಾರದ ಕರ್ತವ್ಯ. ಇತ್ತೀಚೆಗೆ ಕಲುಷಿತ ನೀರಿನಿಂದಾಗಿರುವ ಅನಾಹುತಗಳನ್ನು ನಾವು ನೋಡಿದ್ದೇವೆ. ಅನೇಕರು ಸಾವೀಗೀಡಾಗಿದ್ದು, ಕಾಯಿಲೆಗಳಿಗೂ ಒಳಗಾಗಿದ್ದಾರೆ. ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಸರಬರಾಜಿನ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ಆದರೆ, ನಾಗರಿಕರು ಕೂಡ ಸಹಕರಿಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ನಿಸರ್ಗವನ್ನು ಪ್ರೀತಿಸುವ ಮನಸನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಿಸರ್ಗ ಕಾಪಾಡುವುದು ಕಷ್ಟವೇನಿಲ್ಲ. ಅದನ್ನು ಪ್ರೀತಿಸುವ ಪ್ರವೃತ್ತಿ ಅಗತ್ಯ. ಒಂದು ಮರ ಕಡಿದರೆ ಮತ್ತೊಂದು ನೆಡಬೇಕು. ಕಾಡು ಬೆಳೆಸಬೇಕು. ಕಳೆದ 20 ವರ್ಷಗಳಲ್ಲಿ ಪ್ರವಾಹ ಹಾಗೂ ಬರಗಾಲವನ್ನು ನಾವು ಎದುರಿಸುತ್ತಿದ್ದು ಇದರ ಕಾರಣಗಳ ಬಗ್ಗೆ ಸಂಶೋಧನೆಗಳು ಅಗತ್ಯವೆಂದರು.
ಸಂಶೋಧನೆಗಳು ಸರಿಯಾದ ದಾರಿಯಲ್ಲಿ ನಡೆಯಬೇಕು ಹಾಗೂ ಸಂಶೋಧನಾ ಕೇಂದ್ರಗಳೂ ಹೆಚ್ಚಾಗಬೇಕು. ಯಾವ ಭಾಗದಲ್ಲಿ ಯಾವ ರೀತಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕೆನ್ನುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಸಿಎಂ ಸೂಚಿಸಿದರು.
ಸಚಿವ ಈಶ್ವರ ಬಿ ಖಂಡ್ರೆ ಅವರು ಮಾತನಾಡಿ, ನೆಟ್ಟಿರುವ 5.48 ಕೋಟಿ ಸಸಿಗಳ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ವರದಿ ಸಿದ್ಧವಾಗಲಿದೆ ಎಂದು ಹೇಳಿದರು.
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರವು 12 ತಿಂಗಳ ಅವಧಿಯ ಕಾರ್ಯಕ್ರಮಗಳನ್ನು ಯೋಜಿಸುತ್ತಿದೆ. ಜನವರಿಯನ್ನು ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯ ನಿಯಂತ್ರಣ ಮಾಸವಾಗಿ ಆಚರಿಸಲಾಗಿದ್ದರೆ, ಫೆಬ್ರವರಿಯನ್ನು ಇ-ತ್ಯಾಜ್ಯ ನಿಯಂತ್ರಣ, ಮಾರ್ಚ್ ಅನ್ನು ಶುದ್ಧ ನೀರಿಗೆ, ಏಪ್ರಿಲ್ ಅನ್ನು ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ, ಮೇ ಜೀವವೈವಿಧ್ಯ ಮತ್ತು ಪರಿಸರ ಜಾಗೃತಿಗೆ, ಜೂನ್ ಅನ್ನು ವಿಶ್ವ ಪರಿಸರ ದಿನದ ಸಂದೇಶವನ್ನು ನೀಡಲು ಮೀಸಲಿಡಲಾಗಿದೆ.
ಜುಲೈನಿಂದ ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ನಿರ್ವಹಣೆ, ಆಗಸ್ಟ್‌ನಲ್ಲಿ ವಾಯುಮಾಲಿನ್ಯದ ಜಾಗೃತಿ, ಸೆಪ್ಟೆಂಬರ್‌ನಲ್ಲಿ ಪರಿಸರಕ್ಕೆ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು, ಅಕ್ಟೋಬರ್‌ನಲ್ಲಿ ಜಲ ಮಾಲಿನ್ಯ, ನವೆಂಬರ್‌ನಿಂದ ಪರಿಸರ ಸ್ನೇಹಿ ದೀಪಾವಳಿ ಮತ್ತು ಡಿಸೆಂಬರ್‌ನಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ. ಎಂದರು.
ಏತನ್ಮಧ್ಯೆ ವಿಧಾನಸೌಧದಿಂದ ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದವರೆಗೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಭಾರತ್ ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಸದಸ್ಯರನ್ನೊಳಗೊಂಡ ರ್ಯಾಲಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಸಸಿಗಳನ್ನು ನೆಡಲು ಬಿಬಿಎಂಪಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಡಿಸಿಎಂ ಹೇಳಿದರು.
