ಬೆಂಗಳೂರು
ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಆಸ್ಪತ್ರೆಯಲ್ಲಿ ಹೃದಯದ ತೆರೆದ ಶಸ್ತ್ರಚಿಕಿತ್ಸೆಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಯುವ ಸಮೂಹ ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಕೂಡಾ ಹೃದಯದ ಸಮಸ್ಯೆ ಹೆಚ್ಚುತ್ತಲೇ ಇದೆ. ಪರಿಣಾಮವಾಗಿ ಓಪನ್ ಹಾರ್ಟ್ ಸರ್ಜರಿಗೆ 6 ತಿಂಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಓಪನ್ ಹಾರ್ಟ್ ಸರ್ಜರಿ ಮಾಡಿಸಲು ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ 10 ಲಕ್ಷ ರೂಪಾಯಿಗೂ ಹೆಚ್ಚು ಹಣ ಬೇಕು. ಆದರೆ, ಜಯದೇವ ಆಸ್ಪತ್ರೆಯಲ್ಲಿ ತುಂಬಾ ಕಡಿಮೆ ದುಡ್ಡು ಹಾಗೂ ಉಚಿತ ಸ್ಕೀಂನಲ್ಲಿ ಸರ್ಜರಿ ಮಾಡಿಸಿಕೊಡುವ ಹಿನ್ನೆಲೆ, ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಸದ್ಯ ಜಯದೇವ ಆಸ್ಪತ್ರೆಯಲ್ಲಿ ಪ್ರತಿದಿನ 19 ರಿಂದ 20 ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತಿದೆ. ಒಂದು ಆಪರೇಷನ್ ಥಿಯೇಟರ್ನಲ್ಲಿ ಪ್ರತಿ ದಿನಕ್ಕೆ ಎರಡರಿಂದ ಮೂರು ಸರ್ಜರಿ ಮಾಡಬಹುದಾಗಿದೆ. ಜಯದೇವದಲ್ಲಿ 10 ಆಪರೇಷನ್ ಥಿಯೇಟರ್ಗಳು ಇವೆ. ಸದ್ಯ ಈ 10 ಆಪರೇಷನ್ ಥಿಯೇಟರ್ಗಳು ಕೂಡಾ ವ್ಯ್ತಕವಾಗಿವೆ.
ಹೊಸದಾಗಿ ಬರುವ ರೋಗಿಗಳಿಗೆ ಓಪನ್ ಹಾರ್ಟ್ ಸರ್ಜರಿ ಮಾಡಬೇಕು ಅಂದರೆ 6ತಿಂಗಳ ಕಾಲ ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ರವೀಂದ್ರ ತಿಳಿಸಿದ್ದಾರೆ. ಇದರ ಜೊತೆಗೆ ಸರ್ಕಾರದ ಉಚಿತ ಸ್ಕೀಮ್ ಅಡಿ ರೋಗಿಗಳಿಗೆ ತುಂಬಾ ಕಡಿಮೆ ದರ ನಿಗದಿಪಡಿಸಿರುವ ಕಾರಣ ಖಾಸಗಿ ಆಸ್ಪತ್ರೆಗಳು ಕೂಡಾ ಕೆಲವು ಪ್ರಕರಣಗಳಲ್ಲಿ ರೋಗಿಗಳನ್ನು ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿದ್ದು, ಇದರಿಂದಾಗಿ ಬೇಡಿಕೆ ಹೆಚ್ಚಾಗಿದೆ.
ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಲು ಕಡಿಮೆ ಎಂದರೂ 6 ರಿಂದ 8 ತಿಂಗಳು ಕಾಯಲೇಬೇಕಾಗದ ಪರಿಸ್ಥತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಇತರ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು. ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳಲ್ಲಿಯೂ ಜಯದೇವ ಘಟಕಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಕುರಿತು ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ, ಜಯದೇವ ಆಸ್ಪತ್ರೆಯಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕು ಅಂದರೆ, ಮೂರು ತಿಂಗಳು ಮೊದಲೇ ವೈದ್ಯರನ್ನು ಸಂಪರ್ಕಿಸಬೇಕಿದೆ. ಇಲ್ಲವಾದರೆ ಶಸ್ತ್ರಚಿಕಿತ್ಸೆ ಸೌಲಭ್ಯ ದೊರೆಯುವುದೇ ಅನುಮಾನವಾಗಿದೆ.
