ಮುಂಬೈ:
ಒಬಿಸಿ ಹಿರಿಯ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಛಗನ್ ಭುಜಬಲ್ ಅವರ ರಾಜೀನಾಮೆ ಅಂಗೀಕರಿಸಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.
ಭುಜಬಲ್ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸ್ಪಷ್ಟನೆ ನೀಡಲಿದ್ದಾರೆ ಎಂದು ಫಡ್ನವೀಸ್ ಶನಿವಾರ ತಡರಾತ್ರಿ ಸುದ್ದಿಗಾರರಿಗೆ ತಿಳಿಸಿದರು.ಮಹಾರಾಷ್ಟ್ರ ಸರ್ಕಾರ, ಮರಾಠ ಸಮುದಾಯಕ್ಕೆ ಒಬಿಸಿ ಕೋಟಾವನ್ನು ಹಿಂಬಾಗಿಲ ಮೂಲಕ ನೀಡುತ್ತಿದೆ ಎಂದು ಆರೋಪಿಸಿ ಭುಜಬಲ್ ಅವರು ಕಳೆದ ವರ್ಷ ನವೆಂಬರ್ 16 ರಂದು ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿರುವುದಾಗಿ ಶನಿವಾರ ಹೇಳಿದ್ದಾರೆ.
ನಾನು ರಾಜ್ಯ ಸಚಿವ ಸಂಪುಟಕ್ಕೆ ನವೆಂಬರ್‌ನಲ್ಲೇ ರಾಜೀನಾಮೆ ನೀಡಿದ್ದೇನೆ ಮತ್ತು ಒಬಿಸಿ ಪರವಾಗಿ ಹೋರಾಟವನ್ನು ನಡೆಸುತ್ತಿದ್ದೇನೆ. ಆದರೆ ಈ ಬಗ್ಗೆ ಮಾತನಾಡಬೇಡಿ ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹೇಳಿದ್ದರಿಂದ ಎರಡು ತಿಂಗಳಿಗೂ ಹೆಚ್ಚು ಕಾಲ ಸುಮ್ಮನಿದ್ದೆ ಎಂದು ಭುಜಬಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಭುಜಬಲ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಯಾಗಲಿ ಅಥವಾ ನಾನಾಗಲಿ ಅಂಗೀಕರಿಸಿಲ್ಲ ಎಂದು ನಾನು ಹೇಳಬಲ್ಲೆ. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡುತ್ತಾರೆ ಎಂದು ಹೇಳಿದ್ದಾರೆ.
ಎನ್‌ಸಿಪಿಯ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರಿದ ಭುಜಬಲ್, ಮರಾಠರಿಗೆ ಮೀಸಲಾತಿ ನೀಡುವುದನ್ನು ನಾನು ವಿರೋಧಿಸುವುದಿಲ್ಲ. ಆದರೆ ಒಬಿಸಿಗಳಿಗೆ ಅಸ್ತಿತ್ವದಲ್ಲಿರುವ ಕೋಟಾವನ್ನು ಅವರಿಗೆ ಹಂಚಿಕೆ ಮಾಡುತ್ತಿರುವುದನ್ನು ವಿರೋಧಿಸುತ್ತೇನೆ ಎಂದು ಶನಿವಾರ ಪುನರುಚ್ಚರಿಸಿದ್ದಾರೆ.