ಬೆಂಗಳೂರು:
ಎನ್‌ಆರ್ ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿ ಅವರಿಗೆ 240 ಕೋಟಿ ರೂ.ಗೂ ಹೆಚ್ಚು ಮೌಲ್ಯದ 15 ಲಕ್ಷ ಷೇರುಗಳು ಉಡುಗೊರೆಯಾಗಿ ನೀಡಿದ್ದಾರೆ.
ಮಾರ್ಚ್ 15 ರಂದು ಮೂರ್ತಿ ಈ ಷೇರುಗಳನ್ನು ಮಾರುಕಟ್ಟೆಯ ವಹಿವಾಟಿನಲ್ಲಿ ಉಡುಗೊರೆಯಾಗಿ ನೀಡಿದರು. ಷೇರು ಮಾರುಕಟ್ಟೆಯ ಮಾಹಿತಿಯಂತೆ, ನಾರಾಯಣಮೂರ್ತಿಯವರು ಇನ್ಫೋಸಿಸ್ ನ 15 ಲಕ್ಷ ಷೇರುಗಳನ್ನು ಮೊಮ್ಮಗನಿಗೆ ನೀಡಿದ್ದಾರೆ. ಈ ವರ್ಗಾವಣೆಯು ಷೇರು ಮಾರುಕಟ್ಟೆಯ ಅವಧಿಯ ಹೊರಗೆ ನಡೆದಿದ್ದು, ಫೈಲಿಂಗ್ ಸಂದರ್ಭದಲ್ಲಿ ಬಹಿರಂಗಗೊಂಡಿದೆ ಎಂದು ತಿಳಿದು ಬಂದಿದೆ. ಆ ಮೂಲಕ ಕೋಟ್ಯಧಿಪತಿಗಳ ಸಾಲಿಗೆ ನಾಲ್ಕು ತಿಂಗಳ ಮಗು ಸೇರಿದೆ.
ನಾರಾಯಣಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ದಂಪತಿಗೆ 2023ರ ನವೆಂಬರ್ನಲ್ಲಿ, ಏಕಾಗ್ರ ಜನಿಸಿದ್ದರು. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರಿಗೆ ಏಕಾಗ್ರ ಮೂರನೇ ಮೊಮ್ಮಗು. ಅಕ್ಷತಾ ಮೂರ್ತಿ – ರಿಷಿ ಸುನಕ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.
ನಾರಾಯಣಮೂರ್ತಿ ಅವರು ಈಗ ಇನ್ಫೋಸಿಸ್‌ನ ಆಡಳಿತ ನಿರ್ವಹಣೆಯಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಅದರ ಪ್ರಮುಖ ಷೇರುಪಾಲುದಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇನ್ಫೋಸಿಸ್‌ನಲ್ಲಿ ಮೂರ್ತಿ ಅವರ ಬಳಿ 1.51 ಕೋಟಿ ಷೇರುಗಳಿದ್ದವು. ಈಗ ಮೊಮ್ಮಗನಿಗೆ 15 ಲಕ್ಷ ಷೇರುಗಳನ್ನು ಕೊಟ್ಟ ಬಳಿಕ ಅವರ ಬಳಿ ಉಳಿರುವ ಷೇರುಗಳ ಸಂಖ್ಯೆ 1.36 ಕೋಟಿ. ಈ ಮೂಲಕ ಇನ್ಫೋಸಿಸ್‌ನಲ್ಲಿ ಅವರು ಹೊಂದಿದ್ದ ಶೇ. 0.40ರಷ್ಟು ಷೇರುಪಾಲು ಶೇ. 0.36ಕ್ಕೆ ಇಳಿದಿದೆ.
ಇತ್ತೀಚೆಗೆ ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಧಾ ಮೂರ್ತಿ ಅವರು ಇನ್ಫೋಸಿಸ್‌ನಲ್ಲಿ ಸುಮಾರು 5,600 ಕೋಟಿ ಮೌಲ್ಯದ ಶೇ. 0.83 ರಷ್ಟು ಪಾಲನ್ನು ಹೊಂದಿದ್ದಾರೆ. ಅವರು ಡಿಸೆಂಬರ್ 31, 2023 ರ ಹೊತ್ತಿಗೆ ಸುಮಾರು 3.45 ಕೋಟಿ ಷೇರುಗಳನ್ನು ಹೊಂದಿದ್ದಾರೆ.
ಅವರ ಮಗಳು 0.94% ಪಾಲನ್ನು ಹೊಂದಿದ್ದರೆ, ರೋಹನ್ ಮೂರ್ತಿ IT ಕಂಪನಿಯಲ್ಲಿ 1.47% ಪಾಲನ್ನು ಹೊಂದಿದ್ದಾರೆ. ಮೂರ್ತಿಯವರು 1981 ರಲ್ಲಿ ಸ್ಥಾಪಿಸಿದ ಕಂಪನಿಯನ್ನು ಪ್ರಾರಂಭಿಸಲು ಸುಧಾ ಮೂರ್ತಿ ಅವರು ತಮ್ಮ ಪತಿಗೆ 10,000 ರೂ.ಗಳನ್ನು ಬಂಡವಾಳವಾಗಿ ನೀಡಿದ್ದರು.