ಬೆಂಗಳೂರು : BMTC ಯಲ್ಲಿ ಏಕರೂಪ ಪ್ರಯಾಣ ದರ ಜಾರಿ…!

ಬೆಂಗಳೂರು

      ಬೆಂಗಳೂರು ನಗರದ ಜನರ ಸಂಚಾರದ ಜೀವನಾಡಿಯಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಏಕರೂಪದ ಪ್ರಯಾಣ ದರವನ್ನು ಜಾರಿಗೊಳಿಸಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬಂದಿದೆ ಎಂದು ಪ್ರಕಟಣೆ ಹೇಳಿದೆ. ಬಿಎಂಟಿಸಿ ಬಸ್‌ಗಳಲ್ಲಿ ರಾತ್ರಿ ಸಂಚಾರ ನಡೆಸುವ, ಸಾಮಾನ್ಯ ಬಸ್‌ ಸೇವೆಗಳ ದರಗಳಲ್ಲಿ ವ್ಯತ್ಯಾಸವಿತ್ತು. ಇದರಿಂದಾಗಿ ರಾತ್ರಿಯಿಂದ ಮುಂಜಾನೆ ತನಕ ಬಸ್‌ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಹೆಚ್ಚಿನ ಟಿಕೆಟ್ ದರವನ್ನು ನೀಡಬೇಕಿತ್ತು. 

     ಈಗ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನೇ ರಾತ್ರಿ ಸೇವೆಗಳ ಸಾರಿಗೆಗೆ ನಿಗದಿಪಡಿಸಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 6ರ ರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದೆ ಎಂದು ಬಿಎಂಟಿಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. 

     ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದಲ್ಲಿ ತಡರಾತ್ರಿ, ಮುಂಜಾನೆ ಸಂಚಾರ ನಡೆಸುವ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ ಪಾಳಿಯಲ್ಲಿಯೂ ಬಸ್‌ಗಳನ್ನು ಓಡಿಸುತ್ತದೆ. ಆದರೆ ಸಾಮಾನ್ಯ ಸೇವೆಗಳ ಬಸ್‌ಗಳಿಗಿಂತ ಇವುಗಳ ಪ್ರಯಾಣ ದರ ಹೆಚ್ಚಿತ್ತು. ಇದರಿಂದಾಗಿ ಜನರು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಿತ್ತು.

    ರಾತ್ರಿ ಸೇವೆಗಳ ಬಸ್‌ಗಳಲ್ಲಿ ಏಕರೂಪದ ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 6ರಿಂದಲೇ ಏಕರೂಪದ ದರವನ್ನು ಪಡೆಯಬೇಕು ಎಂದು ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಸೆಪ್ಟೆಂಬರ್ 3ರಂದು ಬಿಎಂಟಿಸಿ ಪ್ರಯಾಣ ದರದ ಕುರಿತು ಟ್ವೀಟ್ ಮಾಡಿತ್ತು. ‘ಜನರಿಗೆ ಎರಡು ಇಡ್ಲಿ ಉಚಿತವಾಗಿ ಕೊಟ್ಟು, ಚಟ್ನಿ, ಸಾಂಬಾರ್‌ಗೆ ರೂ. 1000 ಪೀಕುವ ತುಘಲಕ್ ನೀತಿ ಕಾಂಗ್ರೆಸ್ ಸರ್ಕಾರದ್ದು‌’ ಎಂದು ಟೀಕೆ ಮಾಡಿತ್ತು.

    ‘ಹಗಲು-ರಾತ್ರಿಯೆನ್ನದೇ ಜನರ ಸಂಪಾದನೆಯನ್ನು ಜಿಗಣೆ ರೀತಿ ಹೀರಲೇಬೇಕೆಂದು ನಿರ್ಧರಿಸಿರುವ “ಕೈ” ಸರ್ಕಾರ, ರಾತ್ರಿ 11 ಗಂಟೆಗೆ ಬಿಎಂಟಿ‌ಸಿ ಬಸ್‌ಗಳಲ್ಲಿ ಪ್ರಯಾಣಿಸುವವರ ಬಳಿ ಒಂದೂವರೆ ಪಟ್ಟು ಅಧಿಕ ಟಿಕೆಟ್ ದರ ವಸೂಲಿ ಮಾಡುತ್ತಿದೆ.ಮಧ್ಯರಾತ್ರಿಯಾಗುವುದು 12 ಗಂಟೆಯ ಬಳಿಕ, ಆದರೆ 11 ಗಂಟೆಗೆ ಮಧ್ಯರಾತ್ರಿಯಾಗುತ್ತೆಂದರೆ, ಕಾಂಗ್ರೆಸ್ ಸರ್ಕಾರದ “ಟೈಂ” ಸರಿ ಇಲ್ಲ ಎಂದರ್ಥ’ ಎಂದು ಆರೋಪ ಮಾಡಿತ್ತು. ಬೆಂಗಳೂರು ನಗರದಲ್ಲಿ ಆಟೋ ಚಾಲಕರು 9, 10 ಗಂಟೆಯ ಬಳಿಕ ಮೀಟರ್ ಮೇಲೆ ಡಬ್ಬಲ್ ಹಣ ಕೇಳುತ್ತಾರೆ.

    ಈಗ ಬಿಎಂಟಿಸಿ ಬಸ್‌ನಲ್ಲಿಯೂ ಸಹ 11 ಗಂಟೆಗೆ ಒಂದೂವರೆ ಪಟ್ಟು ಹೆಚ್ಚು ಪ್ರಯಾಣದರ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಎಸ್ಆರ್‌ಟಿಸಿಯಿಂದ ಪ್ರತ್ಯೇಕಗೊಂಡು ಬಿಎಂಟಿಸಿ ರಚನೆಗೊಂಡು 25 ವರ್ಷಗಳು ಕಳೆದಿವೆ. ಬೆಂಗಳೂರು ಜನರ ಸಂಚಾರದ ಜೀವನಾಡಿಯಾಗಿ ಬಿಎಂಟಿಸಿ ಬಸ್ ಕಾರ್ಯ ನಿರ್ವಹಣೆ ಮಾಡುತ್ತದೆ. 6 ಸಾವಿರಕ್ಕೂ ಅಧಿಕ ಬಸ್‌ಗಳಲ್ಲಿ ಪ್ರತಿದಿನ ಲಕ್ಷಾಂತರ ಜನರು ಸಂಚಾರ ನಡೆಸುತ್ತಾರೆ.

    ಹಲವಾರು ಕ್ರಮಗಳ ಮೂಲಕ ಬಿಎಂಟಿಸಿ ಪ್ರಯಾಣಿಕ ಸ್ನೇಹಿಯಾಗಿಯೂ ಬದಲಾಗುತ್ತಿದೆ. ಮೊದಲು ಬಿಎಂಟಿಸಿ ಸ್ವತಂತ್ರ ಸಂಸ್ಥೆಯಾದಾಗ 2088 ಬಸ್‌ಗಳು ಇದ್ದವು. ಈಗ 6570 ಬಸ್‌ಗಳಿವೆ. ಇವುಗಳಲ್ಲಿ 6180 ಡೀಸೆಲ್ ಮತ್ತು 390 ವಿದ್ಯುತ್ ಚಾಲಿತ ಬಸ್‌ಗಳು ಸಂಚಾರ ನಡೆಸುತ್ತಿವೆ. 49 ಘಟಕ, 4 ಕಾರ್ಯಾಗಾರವನ್ನು ಬಿಎಂಟಿಸಿ ಹೊಂದಿದ್ದು, 29,019 ಸಿಬ್ಬಂದಿ ಕೆಲಸ ಮಾಡುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap