ಟಿಪ್ಪು ಜಯಂತಿ : ಮರುಪರಿಶೀಲಿಸಿ ಸೂಕ್ತ ನಿರ್ಧಾರ: ಸುರೇಶ್ ಕುಮಾರ್

ಬೆಂಗಳೂರು

    ತೀವ್ರ ವಿವಾದಕ್ಕೆ ಕಾರಣವಾಗಿದ್ ಟಿಪ್ಪು ಸುಲ್ತಾನ್ ಜಯಂತಿ ರದ್ದುಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮನವಿಗಳು ಬಂದಿದ್ದು, ಇವುಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ತಗೆದುಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಕೊಡಗು ಶಾಸಕ ಅಪ್ಪಚ್ಚು ರಂಜನ್ ಈ ಸಂಬಂಧ ಪತ್ರ ಬರೆದಿದ್ದು, ಇನ್ನೂ ಹಲವು ಮುಖಂಡರು ಜಯಂತಿ ಆಚರಿಸುವ ಔಚಿತ್ಯತೆಯನ್ನು ಪ್ರಶ್ನಿಸಿದ್ದಾರೆ. ಸರ್ಕಾರ ಎಲ್ಲವನ್ನು ಪರಿಶೀಲಿಸಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಡೈರಿ ಡೇ ಮತ್ತು ಬೆಂಗಳೂರು ಟ್ರಸ್ಟ್ ಸಂಸ್ಥೆಗಳು ಅಭಿವೃದ್ಧಪಡಿಸಿರುವ ಸಂಚಾರಿ ತಾರಾಲಯವನ್ನು ಉದ್ಘಾಟಿಸಿ ಮಾತನಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಜಯಂತಿ ಯಾರಿಗೂ ಬೇಕಿರಲಿಲ್ಲ, ಟಿಪ್ಪು ಜಯಂತಿ ಆಚರಿಸಿ ಎಂದು ಯಾರೂ ಬೇಡಿಕೆ ಇಟ್ಟಿರಲಿಲ್ಲ. ಟಿಪ್ಪು ಸುಲ್ತಾನ್ ಅವರಿಂದ ಯಾರೂ ಪ್ರೇರಣೆ ಸಹ ಪಡೆದಿರಲಿಲ್ಲ, ಆದರೆ ಅವರ ಜಯಂತಿ ಆಚರಣೆಯನ್ನು ಯಾಕೆ ಆರಂಭಿಸಿದರೋ ಗೊತ್ತಿಲ್ಲ ಎಂದರು.

    ಸರ್ಕಾರಕ್ಕೆ ಬೇಕಿದ್ದರೆ ಸಂತ ಶಿಶುನಾಳ ಷರೀಫ್ ಅವರ ಜನ್ಮ ಜಯಂತಿ ಆಚರಿಸಬಹುದಿತ್ತು. ನಮ್ಮ ಮುಂದೆ ಬದುಕಿದ್ದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಜಯಂತಿ ಆಚರಿಸಿದ್ದರೆ ಹೆಚ್ಚು ಜನರಿಗೆ ಸಂತಸವಾಗುತ್ತಿತ್ತು. ಮಹತ್ವ ಬರುತ್ತಿತ್ತು ಎಂದರು.

     ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸರ್ಕಾರದ ತೀರ್ಮಾನ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲಿಯೇ ಸರ್ಕಾರದಿಂದ ಆಯೋಗಕ್ಕೆ ಸಮಗ್ರ ಉತ್ತರ ಬರೆಯುವುದಾಗಿ ಸಚವ ಸುರೇಶ್ ಕುಮಾರ್ ತಿಳಿಸಿದರು.

     ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಪ್ರತ್ಯೇಕ ದಳ ರಚಿಸುವ ಉದ್ದೇಶ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಇನ್ನಷ್ಟು ಬಿಗಿ ನಿಯಮಗಳನ್ನು ಅಳವಡಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಸೌರ ಮಂಡಳ ವೀಕ್ಷಣೆಗೆ ಡೈರಿ ಡೇ ಮತ್ತು ಬೆಂಗಳೂರು ಟ್ರಸ್ಟ್ ಸಂಸ್ಥೆಗಳು ಮಾಡಿರುವ ವ್ಯವಸ್ಥೆ ಮತ್ತು ಕಾರ್ಯಕ್ರಮ ಅತ್ಯುತ್ತಮವಾಗಿದೆ. ಇದನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಣ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುದಾಗಿ ಪ್ರಕಟಿಸಿದರು.

    ಗ್ರಹ ಮತ್ತು ನಕ್ಷತ್ರದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಗ್ರಹಕ್ಕೆ ಸ್ವಂತಹ ಬೆಳಗುವ ಶಕ್ತಿಯಿಲ್ಲ. ಗ್ರಹ ಪ್ರತಿಬಿಂಬಿಸುತ್ತದೆ. ನಕ್ಷತ್ರ ಬೆಳಗುತ್ತದೆ. ನಮಗಿರುವುದು ಒಂದೇ ಚಂದ್ರ. ಸೂರ್ಯ, ಆದರೆ ಚಂದ್ರ ಮತ್ತು ಸೂರ್ಯಗ್ರಹಣ ನಡೆಯುವ ದಿನ, ಇಷ್ಟೇ ಸಮಯದಲ್ಲಿ ಗ್ರಹಣ ಘಟಿಸುತ್ತದೆ ಎಂದು ಖಚಿತವಾಗಿ ಹೇಳುವುದು ನಿಜಕ್ಕೂ ತಮಗೆ ಅಚ್ಚರಿ ತಂದಿದೆ ಎಂದರು.

    ಇನ್ನು ಕೆಲವೇ ದಿನಗಳಲ್ಲಿ ನಮ್ಮ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಹೋಗಿ ಇಳಿಯುತ್ತಾರೆ. ಚಂದ್ರಗ್ರಹಣದಲ್ಲಿ ಕೆಲವರು ನಿವೇಶನ ಖರೀದಿಸಲು ಈಗಾಗಲೇ ಮುಂದಾಗಿದ್ದಾರೆ. ಮಂಗಳ ಮತ್ತು ಚಂದ್ರ ಗ್ರಹಣದ ಬಗ್ಗೆ ಸಾಕಷ್ಟು ಅಧ್ಯಯನಗಳು ಭವಿಷ್ಯದಲ್ಲಿ ನಡೆಯುತ್ತವೆ ಎಂದರು.

     ಡೈರಿ ಡೇ ಮತ್ತು ಬೆಂಗಳೂರು ಟ್ರಸ್ಟ್ ಸಂಸ್ಥೆಗಳು ವೈಜ್ಞಾನಿಕ ಮನೋಭಾವನೆ ಬೆಳೆಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ವಿಕಸನ ಜಗದ ನಿಯಮ. ಇಂತಹ ವಿಕಾಸಕ್ಕೆ ಈ ಸಂಸ್ಥೆಗಳು ಕೈ ಜೋಡಿಸಿವೆ ಎಂದು ಸುರೇಶ್ ಕುಮಾರ್ ಹೇಳಿದರು. ವಿದ್ಯಾರ್ಥಿಗಳು ಇನ್ನು ಮುಂದೆ ತಾರಾಲಯ ವೀಕ್ಷಿಸಲು ನೆಹರು ಪ್ಲಾನಿಟೋರಿಯಂಗೆ ಬರುವ ಅವಶ್ಯಕತೆಯಿಲ್ಲ. ಸ್ಕೈ ಪಾರ್ಕ್ 360 ಡಿಗ್ರಿ ಸಂಚಾರಿ ತಾರಾಲಯ ವನ್ನು ತಮ್ಮ ಶಾಲಾ ಅಂಗಳದಲ್ಲೇ ವೀಕ್ಷಿಸಬಹುದು. ನೋಡಲು ಇದು ಗೊಮ್ಮಟದ ಆಕಾರದಲ್ಲಿದ್ದು, ಒಳಗಡೆ ಕತ್ತಲಿನಲ್ಲಿ ಒಂದೇ ಬಾರಿಗೆ 45 ವಿದ್ಯಾರ್ಥಿಗಳು ತಾರಾಲಯ ವೀಕ್ಷಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದರು.

     ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ತೊಂದರೆಗೀಡಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಸಹ ಇದೀಗ ಪರೀಕ್ಷೆಗೆ ಸಿದ್ಧರಾಗಬೇಕಾಗಿದೆ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ಪ್ರದೇಶಗಳಲ್ಲಿನ ಶಾಲೆಗಳ ಸ್ಥಿತಿಗತಿ ಅಧ್ಯಯನಕ್ಕೆ ನಾಳೆಯಿಂದ ಮೂರು ದಿನಗಳ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಚಿವರು ತಿಳಿಸಿದರು.

      ಡೈರಿ ಡೇ ಸಂಸ್ಥಾಪಕರಾದ ಎಂ.ಎನ್. ಜಗನ್ನಾಥ್ ಮಾತನಾಡಿ, ಸದ್ಯಕ್ಕೆ ಬೆಂಗಳೂರು, ಮಂಗಳೂರು ಮತ್ತು ಬಳ್ಳಾರಿಯಲ್ಲಿ ತಾರಾಲಯಗಳಿದ್ದು, ಬಳ್ಳಾರಿ ತಾರಾಲಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ತಾವು ಕಲಿಯುತ್ತಿರುವ ಶಾಲೆಗಳಲ್ಲೇ ಸೌರವ್ಯೂಹದ ಬಗ್ಗೆ ಪರಿಚಯ ಮಾಡಿಕೊಡುವ ಉದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. 40 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಚಾರಿ ತಾರಾಲಯ ನಿರ್ಮಿಸಿದ್ದು, 360 ಡಿಗ್ರಿ ಪ್ರೊಜೆಕ್ಟರ್ ಮೂಲಕ ಇದು ಕಾರ್ಯನಿರ್ವಹಿಸಲಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವಿಷಯ ಪ್ರಸ್ತುತಪಡಿಸಲಾಗಿದೆ ಎಂದರು.

      ಯುವ ಬೆಂಗಳೂರು ಟ್ರಸ್ಟ್ ಸ್ಥಾಪಕ ಟ್ರಸ್ಟಿ ಕಿರಣ್ ಸಾಗರ್ ಮಾತನಾಡಿ, ಮಕ್ಕಳಿಗೆ ದೃಷ್ಯ ಪ್ರಾತ್ಯಕ್ಷಿಕೆಗಳ ಮೂಲಕ ವಿಜ್ಞಾನ ಬೋಧನೆ ಮಾಡಿದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಜತೆಗೆ ಮನದಟ್ಟು ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಸೌರಮಂಡಲ ಕುರಿತ 31 ವಿಷಯಗಳನ್ನು ಮೂರು ಭಾಗಗಳನ್ನಾಗಿ ಮಾಡಿ 3ಡಿ ತಂತ್ರಜ್ಞಾನದ ಮೂಲಕ ಪ್ರಾತ್ಯಕ್ಷಿಕೆ ಸಿದ್ಧಪಡಿಸಲಾಗಿದೆ ಎಂದರು.

      ಈ ಪ್ರಾತ್ಯಕ್ಷಿಕೆ ಪೂರ್ವ ಪ್ರಾಥಮಿಕ ಶಾಲೆಗಳಿಂದ ಪಿಯುಸಿ ವರೆಗೆ ಅನುಕೂಲವಾಗಲಿದೆ. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಇದು ಸಿದ್ಧವಾಗಿದ್ದು, ಮಕ್ಕಳ ಬೇಡಿಕೆಗೆ ಅನುಗುಣವಾಗಿ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂಚಾರಿ ತಾರಾಲಯವನ್ನು ಉಚಿತವಾಗಿ ಸರ್ಕಾರಿ ಶಾಲೆಗಳಿಗೆ ತರಿಸಿಕೊಳ್ಳಬಹುದಾಗಿದೆ.