ತೆಲಂಗಾಣ ಜನರ ಕ್ಷಮೆ ಕೇಳಿದ ನಿರ್ಮಾಪಕ ದಿಲ್ ರಾಜು

ತೆಲಂಗಾಣ :

    ದಶಕಗಳಿಂದಲೂ ತೆಲುಗು ಚಿತ್ರರಂಗದ ಸ್ಟಾರ್ ನಿರ್ಮಾಪಕ ಎನಿಸಿಕೊಂಡಿರುವ ದಿಲ್ ರಾಜು, ತೆಲಂಗಾಣ ಜನರ ಕ್ಷಮೆ ಕೇಳಿದ್ದಾರೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ನಿರ್ಮಾಣ ಮಾಡಿರುವ ದಿಲ್ ರಾಜು, ತೆಲುಗು ಚಿತ್ರರಂಗದ ಸೆಲೆಬ್ರಿಟಿ ನಿರ್ಮಾಪಕ. ಹಲವು ಸಿನಿಮಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ದಿಲ್ ರಾಜು ಭಾಗವಹಿಸುತ್ತಿರುತ್ತಾರೆ. ಇತ್ತೀಚೆಗೆ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಿಲ್ ರಾಜು, ವೇದಿಕೆ ಮೇಲೆ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು. ಅದರ ಕುರಿತಂತೆ ದಿಲ್ ರಾಜು ಕ್ಷಮೆ ಕೇಳಿದ್ದಾರೆ.

   ವಿಕ್ಟರಿ ವೆಂಕಟೇಶ್ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ತೆಲಂಗಾಣದ ನಿಜಾಮಾಬಾದ್​ನಲ್ಲಿ ನಡೆದಿತ್ತು. ದಿಲ್ ರಾಜು ಸಹ ಇದೇ ಊರಿನವರಾಗಿದ್ದು ಮಾತ್ರವೇ ಅಲ್ಲದೆ ಆ ಭಾಗದ ಸಿನಿಮಾ ವಿತರಣೆಯನ್ನು ಅವರೇ ಖರೀದಿ ಮಾಡಿದ್ದರು. ಇದೇ ಕಾರಣಕ್ಕೆ ದಿಲ್ ರಾಜು ಅವರನ್ನು ಸಿನಿಮಾದ ಪ್ರೀ ರಿಲೀಸ್ ಇವೆಂಟ್​ಗೆ ಆಹ್ವಾನಿಸಲಾಗಿತ್ತು.

   ವೇದಿಕೆ ಮೇಲೆ ಮಾತು ಆರಂಭಿಸಿದ ದಿಲ್ ರಾಜು, ‘ಆಂಧ್ರದ ಕೆಲ ನಗರಗಳಲ್ಲಿ ಸಿನಿಮಾ ಕಾರ್ಯಕ್ರಮಕ್ಕೆ ಹೊದಾಗ ಅಲ್ಲಿ ಒಂದು ವೈಬ್ ಕೊಡುತ್ತಾರೆ, ಸಿನಿಮಾ ವಾತಾವರಣ ಸೃಷ್ಟಿ ಮಾಡುತ್ತಾರೆ. ಆದರೆ ತೆಲಂಗಾಣದ ಜನ ಹಾಗಲ್ಲ ಇಲ್ಲಿನವರಿಗೆ ನೀರಾ ಮತ್ತು ಮಟನ್ ಪೀಸ್ ಇದ್ದರೆ ಸಾಕು’ ಎಂದು ತಮಾಷೆಯಾಗಿ ಹೇಳಿದ್ದರು. ಆದರೆ ದಿಲ್ ರಾಜು ಅವರ ಈ ಮಾತು ವಿವಾದಕ್ಕೆ ಕಾರಣವಾಗಿತ್ತು. ದಿಲ್ ರಾಜು ಅವರ ಈ ಹೇಳಿಕೆಯನ್ನು ಹಲವರು ಖಂಡಿಸಿದ್ದರು. ದಿಲ್ ರಾಜು, ತೆಲಂಗಾಣ ಜನರ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. 

   ಈ ಬಗ್ಗೆಸ್ಪಷ್ಟನೆ ನೀಡಿರುವ ದಿಲ್ ರಾಜು ಕ್ಷಮಾಪಣೆ ಕೇಳಿದ್ದಾರೆ. ‘ನಿಜಾಮಾಬಾದ್​ ವಾಸಿ ನಾನು, ಈ ವರೆಗೆ ಅಲ್ಲಿ ಯಾವುದೇ ಸಿನಿಮಾ ಕಾರ್ಯಕ್ರಮ ನಡೆದಿರಲಿಲ್ಲ. ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಕಾರ್ಯಕ್ರಮ ನಡೆದಾಗ ಸ್ಥಳೀಯ ವ್ಯಕ್ತಿಯಾಗಿ ನಾನು ಮಾತನಾಡಿದೆ. ಅಲ್ಲಿ ನಾನು ತೆಲ್ಲ ಕಳ್ಳು (ನೀರಾ) ಮಟನ್ ಬಗ್ಗೆ ಮಾತನಾಡಿದ್ದರ ಬಗ್ಗೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅದೇ ಕಾರ್ಯಕ್ರಮದ ಭಾಷಣದಲ್ಲಿ ಅಂದೇ ನಾನು ಹೇಳಿದ್ದೆ, ತೆಲಂಗಾಣ ದಾವತ್ (ಆತಿಥ್ಯ)ವನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾ ಮುಗಿದ ಮೇಲೆ ಬಂದು ದಾವತ್ ಸ್ವೀಕರಿಸುತ್ತೇನೆ ಎಂದಿದ್ದೆ’ ಎಂದಿದ್ದಾರೆ.

  ‘ನಾನು ತೆಲಂಗಾಣ ಸಂಸ್ಕೃತಿಯನ್ನು ಬಹಳ ಗೌರವಿಸುವ ವ್ಯಕ್ತಿ. ಒಂದೊಮ್ಮೆ ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ನನ್ನನ್ನು ಈ ಪ್ರಾಂಥ್ಯ, ರಾಜ್ಯವಾರು ವಿವಾದಕ್ಕೆ ಎಳೆಯಬೇಡಿ’ ಎಂದು ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link