ಹೊಸದಿಲ್ಲಿ:
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ ಈ ಸಾಲಿನ ಶ್ರೀಮಂತ ಶಾಸಕರ ಪಟ್ಟಿ ಬಿಡುಗಡೆಯಾಗಿದೆ. ಕನಕಪುರದ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ದೇಶದಲ್ಲೇ 2ನೇ ಶ್ರೀಮಂತ ಶಾಸಕ ಎನಿಸಿಕೊಂಡಿದ್ದಾರೆ. ಇವರ ಆಸ್ತಿ ಮೌಲ್ಯ ಆಸ್ತಿ ಮೌಲ್ಯ 1,413 ಕೋಟಿ ರೂ. ಇನ್ನು 3,400 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಮುಂಬೈಯ ಘಾಟ್ಕೋಪರ್ ಪೂರ್ವದ ಬಿಜೆಪಿ ಶಾಸಕ ಪ್ರಯಾಗ್ ಶಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಎಡಿಆರ್ ವರದಿಯು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿತ್‌ನ ವಿಶ್ಲೇಷಣೆಯನ್ನು ಆಧರಿಸಿದೆ. 28 ರಾಜ್ಯಗಳ ವಿಧಾನಸಭೆಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 4,092 ಶಾಸಕರನ್ನು ಒಳಗೊಂಡು ಅಧ್ಯಯನ ನಡೆಸಲಾಗಿದೆ. ಪಶ್ಚಿಮ ಬಂಗಾಳದ ಸಿಂಧೂ ಕ್ಷೇತ್ರದ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ಅವರ ಘೋಷಿತ ಆಸ್ತಿ ಕೇವಲ 1,700 ರೂ. ಹೀಗಾಗಿ ಅವರು ಈ ಪಟ್ಟಿಯ ಕೊನೆಯಲ್ಲಿದ್ದಾರೆ.
ಶ್ರೀಮಂತ ಶಾಸಕರು
- ಪ್ರಯಾಗ್ ಶಾ (ಬಿಜೆಪಿ) – ಮಹಾರಾಷ್ಟ್ರ – 3,400 ಕೋಟಿ ರೂ.
- ಡಿ.ಕೆ.ಶಿವಕುಮಾರ್ (ಕಾಂಗ್ರೆಸ್) – ಕರ್ನಾಟಕ – 1,413 ಕೋಟಿ ರೂ.
- ಕೆ.ಎಚ್.ಪುಟ್ಟಸ್ವಾಮಿ (ಸ್ವತಂತ್ರ) – ಕರ್ನಾಟಕ – 1,267 ಕೋಟಿ ರೂ.
- ಪ್ರಿಯಾಕೃಷ್ಣ (ಕಾಂಗ್ರೆಸ್) – ಕರ್ನಾಟಕ – 1,156 ಕೋಟಿ ರೂ.
- ಎನ್.ಚಂದ್ರಬಾಬು ನಾಯ್ದು (ಟಿಡಿಪಿ) – ಆಂಧ್ರ ಪ್ರದೇಶ – 931 ಕೋಟಿ ರೂ.
- ಪಿ.ನಾರಾಯಣ (ಟಿಡಿಪಿ) – ಆಂಧ್ರ ಪ್ರದೇಶ – 824 ಕೋಟಿ ರೂ.
- ವೈ.ಎಸ್.ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ) – ಆಂಧ್ರ ಪ್ರದೇಶ – 757 ಕೋಟಿ ರೂ.
- ವಿ. ಪ್ರಶಾಂತಿ ರೆಡ್ಡಿ (ಟಿಡಿಪಿ) – ಆಂಧ್ರ ಪ್ರದೇಶ – 716 ಕೋಟಿ ರೂ.
ಶ್ರೀಮಂತ ಶಾಸಕರ ಟಾಪ್ 10 ಪಟ್ಟಿಯಲ್ಲಿ ಆಂಧ್ರ ಪ್ರದೇಶದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಟಾಪ್ 20 ಗಣನೆಗೆ ತೆಗೆದುಕೊಂಡರೆ 7 ಶಾಸಕರಿದ್ದಾರೆ. ಇನ್ನು ಎಲ್ಲ ಶಾಸಕರ ಒಟ್ಟು ಆಸ್ತಿ ಮೌಲ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಲ್ಲಿನ 223 ಶಾಸಕರ ಒಟ್ಟು ಆಸ್ತಿ ಮೌಲ್ಯ 14,179 ಕೋಟಿ ರೂ. 2ನೇ ಸ್ಥಾನದಲ್ಲಿ ಮಹಾರಾಷ್ಟ್ರ (286 ಎಂಎಲ್‌ಎಗಳಿಂದ 12,424 ಕೋಟಿ ರೂ.) ಇದೆ. ಇನ್ನು ಆಂಧ್ರ ಪ್ರದೇಶದ 174 ಶಾಸಕರ ಆಸ್ತಿ ಮೌಲ್ಯ 11,323 ಕೋಟಿ ರೂ.
ತ್ರಿಪುರಾದ 60 ಶಾಸಕರ ಆಸ್ತಿ 90 ಕೋಟಿ ರೂ., ಮಣಿಪುರದ 59 ಶಾಸಕರ ಆಸ್ತಿ ಮೌಲ್ಯ 222 ಕೋಟಿ ರೂ. ಮತ್ತು ಪುದುಚೆರಿಯ 30 ಸದಸ್ಯರ ಆಸ್ತಿ ಮೌಲ್ಯ 297 ಕೋಟಿ ರೂ. ಎಂದು ವರದಿ ತಿಳಿಸಿದೆ. ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಶಾಸಕರು (1,653 ಸದಸ್ಯರು) 26,270 ಕೋಟಿ ರೂ.ಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ಶಾಸಕರು (646 ಸದಸ್ಯರು) 17,357 ಕೋಟಿ ರೂ., ಟಿಡಿಪಿ ಶಾಸಕರು (134 ಸದಸ್ಯರು) 9,108 ಕೋಟಿ ರೂ., ಶಿವಸೇನೆ ಶಾಸಕರು (59 ಸದಸ್ಯರು) 1,758 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
