ದ್ವಿತಾ ಚಂಡಮಾರುತ: ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿ, ರಕ್ಷಣಾ ತಂಡ ಕಳುಹಿಸಿಕೊಟ್ಟ ಭಾರತ

ನವದೆಹಲಿ: 

     ದ್ವಿತಾ ಚಂಡಮಾರುತದ  ಪರಿಣಾಮ ಸಂಕಷ್ಟದಲ್ಲಿರುವ ಶ್ರೀಲಂಕಾದ ಜನತೆಯ ನೆರವಿಗೆ ಭಾರತ ಧಾವಿಸಿದೆ. ಈಗಾಗಲೇ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದ್ದು, ಭಾರತದಿಂದ ರಕ್ಷಣಾ ಸಿಬ್ಬಂದಿ  ಕೂಡ ಧಾವಿಸಿದ್ದಾರೆ. ಚಂಡಮಾರುತದ ಪರಿಣಾಮವಾಗಿ ದೇಶಾದ್ಯಂತ ಸುಮಾರು 153 ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಶ್ರೀಲಂಕಾದ ಜನತೆಯ ನೆರವಿಗೆ ಧಾವಿಸಿರುವ ಭಾರತ ಶನಿವಾರ ಶ್ರೀಲಂಕಾಕ್ಕೆ ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿಕೊಟ್ಟಿದೆ. ಇದರೊಂದಿಗೆ ಆಹಾರ ಸಾಮಗ್ರಿಗಳು, ಟೆಂಟ್‌ಗಳು ಮತ್ತು ಕಂಬಳಿಗಳಂತಹ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.

    ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಶ್ರೀಲಂಕಾದ ನೆರವಿಗೆ ಧಾವಿಸಿರುವ ಭಾರತೀಯ ವಾಯುಪಡೆಯ (IAF) Il-76 ಸಾರಿಗೆ ವಿಮಾನವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಯ 80 ಸಿಬ್ಬಂದಿಯನ್ನು ಕರೆದೊಯ್ದಿದೆ. ಇದರೊಂದಿಗೆ ಎರಡು ನಗರ ಶೋಧ ಮತ್ತು ರಕ್ಷಣಾ ತಂಡಗಳು, ಒಂಬತ್ತು ಟನ್ ಪರಿಹಾರ ಸಾಮಗ್ರಿಗಳನ್ನು ಕೂಡ ‘ಆಪರೇಷನ್ ಸಾಗರ್ ಬಂಧು’ ಭಾಗವಾಗಿ ಕೊಲಂಬೊಗೆ ಸಾಗಿಸಿದೆ ಎಂದು ಹೇಳಿದ್ದಾರೆ. 

   ಎನ್‌ಡಿಆರ್‌ಎಫ್‌ನ 8 ನೇ ಬೆಟಾಲಿಯನ್‌ನ ಕಮಾಂಡೆಂಟ್ ಪಿಕೆ ತಿವಾರಿ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆಗಾಗಿ ರಕ್ಷಣಾ ತಂಡದಲ್ಲಿ ನಾಲ್ಕು ನಾಯಿಗಳನ್ನು, ವಿಶೇಷ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಧನಗಳನ್ನು ತೆಗೆದುಕೊಂಡು ಹೋಗಲಾಗಿದೆ.

    ಕೊಲಂಬೊಗೆ 12 ಟನ್ ಅಗತ್ಯ ಸಾಮಗ್ರಿಗಳನ್ನು ಹೊತ್ತುಕೊಂಡು ಐಎಎಫ್‌ನ ಮತ್ತೊಂದು ಸಿ-130ಜೆ ಸಾರಿಗೆ ವಿಮಾನವು ಸಾಗಿದೆ. ಇದರೊಂದಿಗೆ ಶ್ರೀಲಂಕಾದಲ್ಲಿದ್ದ ಭಾರತೀಯ ನೌಕಾಪಡೆಯ ಯುದ್ಧನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ಉದಯಗಿರಿ ಶುಕ್ರವಾರ 6.5 ಟನ್ ಪಡಿತರ ಮತ್ತು ಇತರ ಅಗತ್ಯ ಪರಿಹಾರ ವಸ್ತುಗಳನ್ನು ಅಗತ್ಯವುಳ್ಳ ಜನರಿಗೆ ತಲುಪಿಸಿದ್ದವು.

    ಈ ಕುರಿತು ಮಾಹಿತಿ ನೀಡಿರುವ ಎನ್‌ಡಿಆರ್‌ಎಫ್‌ನ ಡಿಐಜಿ (ಕಾರ್ಯಾಚರಣೆ) ಮೊಹ್ಸೆನ್ ಶಹೇದಿ, ಎನ್‌ಡಿಆರ್‌ಎಫ್ ತಂಡಗಳು ಅಗತ್ಯವಾಗಿರುವ ಅನೇಕ ಉಪಕರಣಗಳು, ಸಂವಹನ ಸಾಧನಗಳು, ವೈದ್ಯಕೀಯ ಪ್ರಥಮ ಚಿಕಿತ್ಸಾ ಕಿಟ್‌ಗಳು ಮತ್ತು ಇತರ ವಿಶೇಷ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಉಪಕರಣಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

   ಇನ್ನು ವಿಲ್ಲುಪುರಂ, ಚೆಂಗಲ್ಪಟ್ಟು, ತಿರುವಲ್ಲೂರು, ನಾಗಪಟ್ಟಣಂ, ತಿರುವರೂರು, ತಂಜಾವೂರು, ಪುದುಕ್ಕೊಟ್ಟೈ ಮತ್ತು ಮೈಲಾಡುತುರೈ ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ 14 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಹೆಚ್ಚು ಅಪಾಯಕಾರಿಯಾಗಿರುವ ಪುದುಚೇರಿಯಲ್ಲಿ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದ್ದು, ಪುಣೆ ಮತ್ತು ವಡೋದರಾದಿಂದ ಚೆನ್ನೈಗೆ ಇನ್ನೂ 10 ತಂಡಗಳನ್ನು ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಭಾರತ ಹವಾಮಾನ ಇಲಾಖೆ (ಐಎಂಡಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ರಾಜ್ಯ ಸರ್ಕಾರಗಳು, ವಿದೇಶಾಂಗ ಸಚಿವಾಲಯ ಮತ್ತು ಇತರ ಸಂಸ್ಥೆಗಳೊಂದಿಗೆ ನಿರಂತರವಾಗಿ ಎನ್‌ಡಿಆರ್‌ಎಫ್ ಪ್ರಧಾನ ಕಚೇರಿಯು ಸಂಪರ್ಕದಲ್ಲಿದ್ದು, ತುರ್ತು ಸೇವೆಯನ್ನು ದೇಶದ ಜನತೆಗೆ ಒದಗಿಸಲು ಕೂಡ ಸನ್ನದ್ಧವಾಗಿದೆ ಎಂದು ಅವರು ಹೇಳಿದರು.

     ಚಂಡಮಾರುತದಿಂದಾಗಿ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಸಲಾಗುತ್ತಿದೆ. ಪ್ರವಾಹಕ್ಕೆ ಒಳಗಾದ ಪ್ರದೇಶಗಳಲ್ಲಿ ಸಿಲುಕಿರುವ ಜನರೊಂದಿಗೆ ನಿರಂತರ ಸಂಪರ್ಕ ನಡೆಸಲಾಗುತ್ತಿದೆ ಎಂದರು.ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ವಿಮಾನಗಳ ಕೊರತೆಯಿಂದಾಗಿ ಕೊಲಂಬೊದಿಂದ ಹೊರಬರಲು ಸಾಧ್ಯವಾಗದ ತಿರುವನಂತಪುರಂನ ಜನರಿಗೆ ರಕ್ಷಣೆ ಒದಗಿಸಲು ಭಾರತೀಯ ಹೈಕಮಿಷನರ್ ಸಂತೋಷ್ ಝಾ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

     ವಿಮಾನ ನಿಲ್ದಾಣದಲ್ಲಿರುವ ಭಾರತೀಯ ಹೈಕಮಿಷನ್ ನಿಯಂತ್ರಣ ಕೊಠಡಿಯಲ್ಲಿ ನೋಂದಾಯಿಸಿಕೊಂಡಿರುವ ಭಾರತೀಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆದೊಯ್ಯಲು ಭಾರತೀಯ ವಾಯುಪಡೆಯು ಸೋಮವಾರ ಬೆಳಗ್ಗೆ 5 ಗಂಟೆಯಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡುವ ಭರವಸೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

     ನಾಗರಿಕರಿಗೆ ಸಹಾಯ ಮಾಡಲು ಭಾರತೀಯ ಹೈಕಮಿಷನ್ ಕೊಲಂಬೊದ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಸಹಾಯ ಕೇಂದ್ರವನ್ನು ಕೂಡ ಸ್ಥಾಪಿಸಿದೆ. ಇಲ್ಲಿ ನೋಂದಾಯಿಸಿಕೊಂಡಿರುವ ಭಾರತೀಯ ಸ್ಥಳಾಂತರದ ಬಗ್ಗೆ ಯಾವುದೇ ವಿಮಾನ ಸೌಲಭ್ಯ ಒದಗಿಸುವ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಭಾರತೀಯ ಪ್ರಯಾಣಿಕರಿಗೆ ಸಹಾಯ ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಅವರು ತಿಳಿಸಿದ್ದಾರೆ. 

    ಹಂಗಾಮಿ ಹೈಕಮಿಷನರ್ ಸತ್ಯಂಜಲ್ ಪಾಂಡೆ ಬಂಡರನಾಯಕೆ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯರನ್ನು ಭೇಟಿಯಾಗಿ ಅವರಿಗೆ ಸಾಧ್ಯವಿರುವ ಎಲ್ಲಾ ಸಹಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಸುಮಾರು 44,000 ಜನರು ಸಂಕಷ್ಟದಲ್ಲಿದ್ದಾರೆ. ವಾರಪೂರ್ತಿ ಸುರಿದ ಭಾರೀ ಮಯಿಂದಾಗಿ ಹಲವಾರು ಮಂದಿ ಮನೆಯನ್ನು ಕಳೆದುಕೊಂಡಿದ್ದು, ಅವರನ್ನು ಸರ್ಕಾರಿ ಸ್ವಾಮ್ಯದ ಕಲ್ಯಾಣ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತವು ಶ್ರೀಲಂಕಾದಿಂದ ಭಾರತದ ಕಡೆಗೆ ಚಲಿಸುತ್ತಿದೆ ಎಂದು ಶ್ರೀಲಂಕಾದ ವಿಪತ್ತು ನಿರ್ವಹಣಾ ಕಾರ್ಯಪಡೆ ತಿಳಿಸಿದೆ. 

Recent Articles

spot_img

Related Stories

Share via
Copy link