ಬೆಂಗಳೂರು:
ಕರ್ತವ್ಯದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನೌಕರರ ಕುಟುಂಬದವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ತಲಾ 1 ಕೋಟಿ ರೂಪಾಯಿ ಪರಿಹಾರವನ್ನು ವಿತರಿಸಿದ್ದಾರೆ. ಕೆಎಸ್‌ಆರ್‌ಟಿಸಿಯ ಅಪಘಾತ ವಿಮೆ (ಸಾರಿಗೆ ಸುರಕ್ಷಾ) ಅಡಿಯಲ್ಲಿ ಈ ಮೊತ್ತವನ್ನು ನೀಡಲಾಯಿತು.
ಇಲ್ಲಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಕೆಎಸ್‌ಆರ್‌ಟಿಸಿ ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯಡಿ ಅಪಘಾತ ಹೊರತುಪಡಿಸಿ ವಿವಿಧ ಕಾಯಿಲೆಗಳಿಂದ ಮೃತಪಟ್ಟ 23 ನೌಕರರ ಅವಲಂಬಿತರಿಗೆ ತಲಾ 10 ಲಕ್ಷ ರೂ. ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವ ವೇಳೆ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಪ್ರಯಾಣಿಕರ ಅವಲಂಬಿತರಿಗೆ ತಲಾ 10 ಲಕ್ಷ ರೂ.ಗಳನ್ನು ವಿತರಿಸಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಪ್ರಯಾಣಿಕರಿಗಾಗಿ ನಿಗಮವು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸಿದೆ. ಮೃತಪಟ್ಟವರ ಜೀವವು ಅಮೂಲ್ಯವಾಗಿದ್ದು, ಅದನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬದ ಆರ್ಥಿಕ ಭದ್ರತೆಗಾಗಿ ನಿಗಮವು 1 ಕೋಟಿ ರೂ. ವಿಮೆ ಯೋಜನೆ ದೂರದೃಷ್ಟಿಯನ್ನು ಹೊಂದಿದೆ. ಇಲ್ಲಿಯವರೆಗೆ ಅಪಘಾತದಲ್ಲಿ ಮೃತಪಟ್ಟ 17 ಮಂದಿಯ ಕುಟುಂಬಕ್ಕೆ ಈ ವಿಮೆ ತಲುಪಿದೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಿಗಮದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಶ್ರಮಜೀವಿಗಳು, ಅವರಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಇಂದು ಪರಿಹಾರ ಮೊತ್ತವನ್ನು ಪಡೆದವರು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಕುಟುಂಬವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು ಎಂದು ಕೆಎಸ್ಆರ್‌ಟಿಸಿ ಅಧ್ಯಕ್ಷ ಎಸ್ಆರ್ ಶ್ರೀನಿವಾಸ್ ಹೇಳಿದರು.