ಕಲಬುರಗಿ :
ರಾಜ್ಯದಲ್ಲಿ ಮೂಡಾ ಹಗರಣದಿಂದ ಕೆಟ್ಟ ಪರಿಸರ ಮತ್ತು ದೇಶಕ್ಕೆ ಕೆಟ್ಟ ಸಂದೇಶ ಹೋಗುತ್ತಿದೆ. ನೈತಿಕತೆಯಿಂದ ಕೂಡಲೇ ಹಗರಣದಲ್ಲಿ ಆರೋಪಿತರಾಗಿರುವ ಸಿಎಂ ಸಿದ್ಧರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸಿಎಂ ಒಬ್ಬರು ಮೊದಲ ಬಾರಿ ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ. ಇದು ರಾಜ್ಯಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಕಪ್ಪು ಚುಕ್ಕೆ. ಶಾಸಕ ಕೋನರೆಡ್ಡಿ ಸಿದ್ಧರಾಮಯ್ಯ ಚಿನ್ನ, ಆರೋಪ ಬಂದ ಬಳಿಕ ಬೆಲೆ ಕಡಿಮೆಯಾಗಲ್ಲ ಅಂದಿರುವ ಮಾತನ್ನು ಉಲ್ಲೇಖಿಸಿ, ಚಿನ್ನವಾಗಲಿ, ವಜ್ರವಾಗಲಿ ತಕರಾರಿಲ್ಲ. ಮೊದಲು ರಾಜೀನಾಮೆ ನೀಡಿ ಆರೋಪ ಮುಕ್ತವಾಗಿ ವಜ್ರವೆಂದು ಸಾಬೀತು ಮಾಡಲಿಎಂದು ಸವಾಲು ಹಾಕಿದರು.
ಕಾಂಗ್ರೆಸ್‌ನವರಿಗೆ ಸಿದ್ಧರಾಮಯ್ಯ ಎಟಿಎಂ ಇದ್ದ ಹಾಗೆ. ಇದರಿಂದಾಗಿ ಹೈಕಮಾಂಡ್ ರಾಜೀನಾಮೆಗೆ ಒತ್ತಾಯ ಮಾಡುತ್ತಿಲ್ಲ. ಅದೂ ಅಲ್ಲದೆ, ಸಿದ್ಧರಾಮಯ್ಯ ರಾಜೀನಾಮೆ ನೀಡಿದರೆ ಸರಕಾರ ಬಿದ್ದು ಹೋಗುತ್ತದೆ. ಇದು ಜನರು ಆಶೀರ್ವಾದ ಮಾಡಿ ೧೩೬ ಸ್ಥಾನ ಗೆದ್ದು ರಚನೆಯಾಗಿರುವ ಸರಕಾರ ಬಹಳದಿನ ಉಳಿಯಲಿ ಎನ್ನುವುದು ನನ್ನಾಸೆ. ಆದರೆ, ಆರೋಪ ಬಂದ ಮೇಲೂ ಸಿಎಂ ಕುರ್ಚಿಯಲ್ಲಿ ಕುಳಿತು ದರ್ಪದ ಮಾತುಗಳಮ್ನಾಡುವುದು ಸರಿಯಲ್ಲ. ತುಸು ಆಲೋಚಿಸಿ, ವಿವೇಕದಿಂದ ಮಾತಾಡಲಿ ಎಂದು ಸಲಹೆ ನೀಡಿದರು.
ಕೆ.ಜೆ.ಜಾರ್ಜ್ ಮೇಲೆ ಆರೋಪ ಬಂದಾಗ ಸಮರ್ಥನೆ, ನನ್ನ ಮೇಲೆ ಆರೋಪ ಬಂದಾಗ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ ಸೇರಿ ಹೋರಾಟ ಮಾಡಿದಿರಲ್ಲ, ಮತ್ತೆ ಈಗೆಲ್ಲಿ ಹೋಯಿತು ನಿಮ್ಮ ಆದರ್ಶ, ನೈತಿಕತೆ ಎಂದು ಪ್ರಶ್ನಿಸಿದರು.
ಸಿದ್ದು ಪತ್ನಿ ಪಾರ್ವತಿ ಏನೂ ಗೊತ್ತಿರದ ಹೆಣ್ಣುಮಗಳು. ದೇವಸ್ಥಾನ, ಮನೆ ಅಂತಾ ಇದ್ದವರು. ಅಂತಹವರನ್ನು ಮೂಡಾದಲ್ಲಿ ಎಳೆಯಲಾಗಿದೆ. ಅವರು ಕಚೇರಿ, ಲೋಕಾ, ವಿಚಾರಣೆ ಎಂದೆಲ್ಲಾ ಓಡಾಡುವಂತಾಗಿದೆ. ಇದೆಲ್ಲದರ ಹಿಂದೆ ಸಿದ್ಧರಾಮಯ್ಯನ ಹಿಕಮತಿ, ದುರಹಂಕಾರವಿದೆ ಎಂದರು.