ಹಾಸನ:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತಾನಾಗಿಯೇ ಪತನವಾಗಲಿದೆ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ಇಬ್ಬೀಡು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ, ಚುನಾವಣೆಯ ನಂತರ ನಾನು ಬದುಕುತ್ತೇನೆ. ಆದರೆ ಕಾಂಗ್ರೆಸ್ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದರು.
91 ವರ್ಷ ತುಂಬಿದ ನಂತರ ಅರಳುಮರಳು ಎಂದು ತಮ್ಮನ್ನು ಟೀಕಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡರು, ಮಹಿಳೆಯರ ವಿರುದ್ಧದ ಹೇಳಿಕೆಗಾಗಿ ತಮ್ಮ ಪುತ್ರ ಎಚ್‌ಡಿ ಕುಮಾರಸ್ವಾಮಿ(ಎಚ್‌ಡಿಕೆ) ವಿರುದ್ಧ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸಿದರು. ಎಚ್‌ಡಿಕೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ, ಅದನ್ನು ರಾಜಕೀಯ ಲಾಭಕ್ಕಾಗಿ ತಿರುಚಲಾಗಿದೆ ಎಂದರು. ಮುಖ್ಯಮಂತ್ರಿಯಾಗಿ ಎಚ್‌ಡಿಕೆ ಜಾರಿಗೆ ತಂದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಶ್ಲಾಘಿಸಿದ ಗೌಡರು, ಸಮಾಜದ ವಿವಿಧ ವರ್ಗಗಳಿಗೆ ಅವರು ನೀಡಿದ ಕೊಡುಗೆಗಳನ್ನು ಜನರು ಸ್ಮರಿಸಬೇಕು ಎಂದು ಹೇಳಿದರು.
ಜೆಡಿಎಸ್ ಮತ್ತು ತಮ್ಮ ಕುಟುಂಬದ ಸದಸ್ಯರನ್ನು ಟಾರ್ಗೆಟ್ ಮಾಡುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೇವೇಗೌಡರು, ನಾನು ಸಹ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಡಿಕೆ ಶಿವಕುಮಾರ್ ಅವರ ಇಮೇಜ್‌ಗೆ ಧಕ್ಕೆ ತರಬಹುದು. ಆದರೆ ಈ ವಯಸ್ಸಿನಲ್ಲಿ ಅದನ್ನು ಮಾಡಲು ಬಯಸುವುದಿಲ್ಲ ಎಂದರು.
ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದಲ್ಲಿ ಪ್ರಧಾನಿಯಾಗಲು ಯಾವುದೇ ಶ್ರೇಷ್ಠ ನಾಯಕ ಇಲ್ಲ ಎಂದು ಪುನರುಚ್ಚರಿಸಿದ ದೇವೇಗೌಡರು, ಸೋನಿಯಾ ಗಾಂಧಿಯವರು ಪಕ್ಷ ಮತ್ತು ಕೇಂದ್ರದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರದ ಕೇಂದ್ರ ಸಚಿವ ಸಂಪುಟವನ್ನು ನಿಯಂತ್ರಿಸಿದ್ದರು ಎಂದು ಆರೋಪಿಸಿದರು.