ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಂದೆ

ಹೈದರಾಬಾದ್‌:

     ಶೈಕ್ಷಣವಾಗಿ ಹಿಂದುಳಿದಿದ್ದ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದ ತಂದೆಯೊಬ್ಬ ಮಕ್ಕಳಿಬ್ಬರ ಕೈಕಾಲುಗಳನ್ನು ಕಟ್ಟಿ, ತಲೆಗಳನ್ನು ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.   ವನಪಲ್ಲಿ ಚಂದ್ರಕಿಶೋರ್ ಸ್ಥಳೀಯ ಒಎನ್‌ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದ. ತನ್ನ ಇಬ್ಬರು ಮಕ್ಕಳ ಬಗ್ಗೆ ಅತಿಯಾದ ಕನಸು ಕಂಡಿದ್ದ ಈತ ಪ್ರತೀ ಬಾರಿ ಅವರು ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಅಂಕವನ್ನು ಕಂಡು ಅಸಮಾಧಾನಗೊಂಡಿದ್ದ. ಈ ಬಗ್ಗೆ ಹಲವು ಬಾರಿ ಮನೆಯಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ.

    ಚಂದ್ರಕಿಶೋರ್ ಇತ್ತೀಚಿಗಷ್ಟೇ ಹೋಳಿ ಹಬ್ಬದ ಸಂದರ್ಭದಲ್ಲಿ, ಚಂದ್ರಕಿಶೋರ್ ತಮ್ಮ ಪತ್ನಿ ತನುಜಾ ಮತ್ತು ಇಬ್ಬರು ಪುತ್ರರಾದ ಜೋಶಿಲ್ ಮತ್ತು ನಿಖಿಲ್ ಅವರೊಂದಿಗೆ ತಮ್ಮ ಕಚೇರಿಗೆ ಹೋಗಿದ್ದರು. ಮಕ್ಕಳನ್ನು ಸಮವಸ್ತ್ರದ ಅಳತೆಗಳನ್ನು ತೆಗೆದುಕೊಳ್ಳಲು ಟೈಲರ್ ಬಳಿ ಕರೆದೊಯ್ಯುತ್ತಿರುವುದಾಗಿ ಪತ್ನಿಗೆ ತಿಳಿಸಿ ಕಚೇರಿಯಲ್ಲಿಯೇ ಇರಲು ಹೇಳಿದ್ದಾನೆ. ಚಂದ್ರಕಿಶೋರ್ ಇಬ್ಬರು ಮಕ್ಕಳನ್ನು ನೇರ ಮನೆಗೆ ಕರೆದುಕೊಂಡು ಹೋಗಿದ್ದಾನೆ.

   ಇಬ್ಬರು ಮಕ್ಕಳನ್ನು ಮನೆಗೆ ಕರೆದೊಯ್ದ ನಂತರ, ಚಂದ್ರಕಿಶೋರ್ ಅವರ ಕೈಕಾಲುಗಳನ್ನು ಕಟ್ಟಿ, ತಲೆಗಳನ್ನು ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿಸಿ ಕೊಂದಿದ್ದಾನೆ. ಬಳಿಕ ತಾನೂ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ಪಶ್ಚಿಮ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಮ್‌ನ ಈ ವ್ಯಕ್ತಿ, ತನ್ನ ಹೆಂಡತಿ ಮತ್ತು ಅಪ್ಪರ್ ಕಿಂಡರ್‌ಗಾರ್ಟನ್ (ಯುಕೆಜಿ) ಮತ್ತು 1 ನೇ ತರಗತಿ ವಿದ್ಯಾರ್ಥಿಗಳಾದ ಇಬ್ಬರು ಗಂಡು ಮಕ್ಕಳೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ದಂಪತಿಗಳು ಇತ್ತೀಚೆಗೆ ತಮ್ಮ ಮಕ್ಕಳ ಶಾಲೆಯನ್ನು ಬದಲಾಯಿಸಿದ್ದರು. 

    ಪತಿ ಬಹಳ ಸಮಯವಾದರೂ ಹಿಂತಿರುಗದಿದ್ದಾಗ, ತನುಜಾ ತನ್ನ ಸಹೋದ್ಯೋಗಿಗಳೊಂದಿಗೆ ಮನೆಗೆ ಹೋಗಿದ್ದಾಳೆ. ಕಿಟಕಿಯಿಂದ ಮನೆಯೊಳಗೆ ನೋಡಿದಾಗ, ಪತಿ ಮತ್ತು ಮಕ್ಕಳು ಸತ್ತಿರುವುದು ಕಂಡು ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದು, ಚಂದ್ರಕಿಶೋರ್ ಬರೆದಿರುವ ಡೆತ್​ ನೋಟ್​​ ಸ್ಥಳದಲ್ಲಿ ಪತ್ತೆಯಾಗಿದೆ. ಅದರಲ್ಲಿ ಚಂದ್ರಕಿಶೋರ್ ತನ್ನ ಮಕ್ಕಳು ಇಂದಿನ ಸ್ಪರ್ಧಾತ್ಮಕ ಪ್ರಪಂಚದ ಒತ್ತಡವನ್ನು ನಿಭಾಯಿಸಲು ಸಾಧ್ಯವಿಲ್ಲ ಮತ್ತು ಅವರಿಗೆ ಭವಿಷ್ಯವಿಲ್ಲ ಎಂದು ನಂಬಿದ್ದೇನೆ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.