ವಿಜಯಪುರ
ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಯುಗದಲ್ಲಿ ಆನ್ ಲೈನ್ ವಂಚನೆ ಎಗ್ಗಿಲ್ಲದೇ ನಡೆಯುತ್ತಿದೆ. ಈ ಮುಂಚೆ ಕರೆ ಮಾಡಿ ನಾವು ಬ್ಯಾಂಕ್ನವರು, ಪೊಲೀಸ್ ಕಸ್ಟಮ್ಸ್ ಅಧಿಕಾರಿಗಳು ಎಂದು ಸುಳ್ಳು ಹೇಳಿ ವಂಚಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಅವರು ಕೂಡ ಬದಲಾಗಿದ್ದು, ಇದೀಗ ವಿಡಿಯೋ ಕಾಲ್ ಮಾಡಿ ಬೇರೆ ರಾಜ್ಯದ ಪೊಲೀಸರು ಎಂದು ಬೆದರಿಕೆ ಹಾಕಿ ಓಟಿಪಿ ನಂಬರ್ ಪಡೆದು ಮೋಸ ಮಾಡುವ ಜಾಲ ಹುಟ್ಟಿಕೊಂಡಿದ್ದು, ಇಂತಹದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ನಗರದ ನಿವಾಸಿ ಸಂತೋಷ ಚೌಧರಿ ಎಂಬುವವರಿಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸ್ ಅಧಿಕಾರಿ ಎಂದು ಕರೆ ಮಾಡಿ ಬೆದರಿಕೆ ಹಾಕಿ ಓಟಿಪಿ ಪಡೆಯಲು ಯತ್ನಿಸಿರುವಂತಹ ಘಟನೆ ನಡೆದಿದೆ. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸ್ ಯುನಿಫಾರ್ಮ್ ಹಾಕಿಕೊಂಡು ಓರ್ವ ವ್ಯಕ್ತಿ 69-A ರೋಡ್ ವಿಜಯನಗರ ಕಾಲೋನಿ ಜೆವಿ ನಗರ ಅಂದೇರಿ ಇಸ್ಟ್ ಮುಂಬೈ ಪೊಲೀಸ್ ಠಾಣೆಯಿಂದ ಮಾತನಾಡುತ್ತಿರೋದಾಗಿ ತಿಳಿಸಿದ್ದಾರೆ.
ನಿಮ್ಮ ಮೊಬೈಲ್ ನಂಬರ್ ಮೇಲೆ 17 ವಿವಿಧ ಪ್ರಕರಣಗಳು ದಾಖಲಾಗಿವೆ. ಅಶಾಂತಿ ಸೃಷ್ಟಿ ಮಾಡುವುದು ಹಾಗೂ ಹಿಂಸೆ ಮಾಡುವ ಸಂದೇಶ ಹಾಕಿರುವ ಕಾರಣ ಕೇಸ್ಗಳು ದಾಖಲಾಗಿವೆ ಎಂದು ನಕಲಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬಳಿಕ ಒನ್ ಸೈಡ್ ವಿಡಿಯೋ ಕಾಲ್ ಮಾಡಿ ಸಹಾಯಕ ಅಧಿಕಾರಿ ಜೊತೆಗೆ ಮಾತನಾಡು ಎಂದು ಹೇಳಿದ್ದಾನೆ. ಸಹಾಯಕ ಅಧಿಕಾರಿ ಸಂತೋಷ ಚೌಧರಿ ಆಧಾರ್ ಕಾರ್ಡ್, ಓಟಿಪಿ ನಂಬರ್ ಕೇಳಿದ್ದಾನೆ. ಈ ಕುರಿತು ಸಂಶಯ ಬಂದ ಹಿನ್ನಲೆ ಸಂತೋಷ ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಸಿಇಎನ್ ಠಾಣೆಗೆ ಆಗಮಿಸಿ ವಿಡಿಯೋ ಕಾಲ್ ಸ್ಕ್ರೀನ್ ರೆಕಾರ್ಡ್ ವಿಜಯಪುರ ಸಿಇಎನ್ ಪೊಲೀಸರಿಗೆ ನೀಡಿ ದೂರು ದಾಖಲು ಮಾಡಿದ್ದಾರೆ. ಸದ್ಯ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.