ಬೆಂಗಳೂರು:
ಇಂದು ಬೆಳ್ಳಂಬೆಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಭ್ರಷ್ಟರ ಬೇಟೆಗೆ ಇಳಿದಿದ್ದಾರೆ. ನಗರದ 9 ವಿವಿಧ ಅಧಿಕಾರಿಗಳು, ವ್ಯಕ್ತಿಗಳ ಮೇಲೆ ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆಸಿದ್ದಾರೆ. ಅದರಲ್ಲೂ ಹತ್ತು ವರ್ಷಗಳ ಹಿಂದೆ ಆಟೋ ಮೊಬೈಲ್ ಅಂಗಡಿ ಇಟ್ಟಿದ್ದಂತ ಮೋಹನ್ ಎಂಬುವರ ಮನೆಯೇ ಈಗ ಗೋಲ್ಡ್ ಪ್ಯಾಲೇಸ್ ಆಗಿರೋದನ್ನು ಕಂಡು, ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಬಿಡಿಎ ಬ್ರೋಕರ್ ಆಗಿದ್ದಂತ ಮೋಹನ್ ಎಂಬುವರ ಮನೋರಾಮ ಪಾಳ್ಯದಲ್ಲಿನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ( ACB Raid ) ನಡೆಸಿದ್ದಾರೆ. ಅವರ ಮನೆಯಲ್ಲಿ ಜಾಲಾಡಿದಂತ ಅಧಿಕಾರಿಗಳಿಗೆ ಗೋಲ್ಡ್ ಸರ, ಬಂಗಾರದ ಮೊಗ್ಗಿನ ಜಡೆ, ವಜ್ರದ ಹಾರ ಪತ್ತೆಯಾಗಿದೆ. ಈ ಎಲ್ಲವನ್ನು ಕಂಡು ಎಸಿಬಿ ಅಧಿಕಾರಿಗಳೇ ದಂಗಾಗಿದ್ದಾರೆ. ಇನ್ನೂ ಚಿನ್ನ, ಬೆಳ್ಳಿ, ವಜ್ರವಲ್ಲದೇ ಕಂತೆ ಕಂತೆ ನೋಟು ಕೂಡ ಎಸಿಬಿ ಅಧಿಕಾರಿಗಳಿಗೆ ಪತ್ತೆಯಾಗಿದೆ.
ಅಂದಹಾಗೇ ಬಿಡಿಎ ಬ್ರೋಕರ್ ಆಗಿರುವಂತ ಇದೇ ಮೋಹನ್, ಈ ಮೊದಲು ಆಟೋ ಮೊಬೈಲ್ಸ್ ಅಂಗಡಿಯನ್ನು ಸುಲ್ತಾನ್ ಪಾಳ್ಯದಲ್ಲಿ ಇಟ್ಟಿದ್ದರಂತೆ. ಈ ಬಳಿಕ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಗೆ ಇಳಿದಂತ ಅವರು, ಬಿಡಿಎ ಬ್ರೋಕರ್ ಕೂಡ ಆಗಿ ಕೆಲಸ ಮಾಡುತ್ತಿದ್ದರಂತೆ. ಇಂತಹ ಮೋಹನ್ ಮನೆಯ ಕೂಡ ಈಗ ಗೋಲ್ಡ್ ಪ್ಯಾಲೇಸ್ ರೀತಿಯಲ್ಲಿರೋದನ್ನು ಕಂಡು ಎಸಿಬಿ ಅಧಿಕಾರಿಗಳೇ ಅಚ್ಚರಿ ಪಟ್ಟಿದ್ದಾರೆ.
ಇದಷ್ಟೇ ಅಲ್ಲದೇ ಮೋಹನ್ ಮನೆಯಲ್ಲಿ ಡೈರಿಯೊಂದು ಎಸಿಬಿ ಅಧಿಕಾರಿಗಳಿಗೆ ದೊರೆತಿದೆ ಎನ್ನಲಾಗುತ್ತಿದೆ. ಈ ಡೈರಿಯಲ್ಲಿ ಬಿಡಿಎ ಯಾವ ಯಾವ ಅಧಿಕಾರಿಗಳಿಗೆ ಎಷ್ಟು ಲಂಚ ಕೊಟ್ಟಿದ್ದೇನೆ ಎಂಬುದಾಗಿಯೂ ಬರೆದಿರೋ ಮಾಹಿತಿ ಇದೆ ಎನ್ನಲಾಗುತ್ತಿದೆ. ಹೀಗಾಗಿ ಬ್ರೋಕರ್ ಮೋಹನ್ ಸಂಪರ್ಕದಲ್ಲಿದ್ದಂತ ಬಿಡಿಎ ಅಧಿಕಾರಿಗಳಿಗೆ, ಈಗ ನಡುಕ ಶುರುವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
