ಕ್ಯಾಲಿಫೋರ್ನಿಯಾ
ಗೂಗಲ್ ಸಂಸ್ಥೆಯಲ್ಲಿ ಹೊಸ ಸುತ್ತಿನ ಲೇ ಆಫ್ ನಡೆಯುತ್ತಿದೆ. ಅದರ ಪ್ಲಾಟ್ಫಾರ್ಮ್ಸ್ ಮತ್ತು ಡಿವೈಸ್ ಯೂನಿಟ್ನಿಂದ ನೂರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ. ದಿ ಇನ್ಫಾರ್ಮೇಶನ್ ಎನ್ನುವ ವೆಬ್ಸೈಟ್ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಪ್ಲಾಟ್ಫಾರ್ಮ್ ಮತ್ತು ಡಿವೈಸ್ ಯೂನಿಟ್ನಲ್ಲಿರುವ ಉದ್ಯೋಗಿಗಳು ಆಂಡ್ರಾಯ್ಡ್ ಸಾಫ್ಟ್ವೇರ್, ಪಿಕ್ಸೆಲ್ ಫೋನ್, ಕ್ರೋಮ್ ಬ್ರೌಸರ್ ಇತ್ಯಾದಿ ಉತ್ಪನ್ನಗಳನ್ನು ನಿರ್ವಹಿಸುತ್ತಾರೆ. ಇವರಲ್ಲಿ ನೂರಾರು ಮಂದಿಯನ್ನು ಕೆಲಸ ಬಿಡುವಂತೆ ಗೂಗಲ್ ಮ್ಯಾನೇಜ್ಮೆಂಟ್ ತಿಳಿಸಿದೆಯಂತೆ. ಆದರೆ, ಎಷ್ಟು ಮಂದಿಯ ಲೇ ಆಫ್ ಮಾಡಲಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಗೂಗಲ್ನಿಂದ ಅಧಿಕೃತವಾಗಿ ಯಾವ ಮಾಹಿತಿಯೂ ಬಂದಿಲ್ಲ. ಆದರೆ, ಉದ್ಯೋಗಿಗಳಿಗೆ ಸ್ವ ಇಚ್ಛೆಯಿಂದ ಕೆಲಸ ಬಿಡುವ ಅವಕಾಶವನ್ನು ಗೂಗಲ್ ಕೆಲ ತಿಂಗಳ ಹಿಂದೆ ಆಫರ್ ಮಾಡಿತ್ತು. ಆ ಸಂದರ್ಭದಲ್ಲಿ ಗೂಗಲ್ನಲ್ಲಿ ಹೆಚ್ಚುವರಿ ಲೇ ಆಫ್ ಮಾಡುವ ಸುಳಿವನ್ನು ಗೂಗಲ್ ವಕ್ತಾರರು ಹೊರಹಾಕಿದ್ದರು.
‘ಪ್ಲಾಟ್ಫಾರ್ಮ್ಸ್ ಮತ್ತು ಡಿವೈಸಸ್ ತಂಡಗಳನ್ನು ಕಳೆದ ವರ್ಷ ಒಟ್ಟು ಸೇರಿಸಿದಾಗಿನಿಂದ ನಾವು ಹೆಚ್ಚು ಕ್ಷಮತೆ, ಕಡಿಮೆ ಗಾತ್ರಕ್ಕೆ ಒತ್ತು ಕೊಡುತ್ತಿದ್ದೇವೆ. ಜನವರಿಯಲ್ಲಿ ವಾಲಂಟರಿ ಎಕ್ಸಿಟ್ ಸ್ಕೀಮ್ ಜೊತೆಗೆ ಕೆಲ ಉದ್ಯೋಗಗಳನ್ನೂ ತೆಗೆಯುತ್ತಿದ್ದೇವೆ’ ಎಂದು ಗೂಗಲ್ ವಕ್ತಾರರು ಹೇಳಿದ್ದರು.ಒಟ್ಟಾರೆ, ಗೂಗಲ್ ತನ್ನ ಕಾರ್ಯಾಚರಣೆ ಮರು ರಚಿಸಲು ಮತ್ತು ವೆಚ್ಚ ಕಡಿಮೆ ಮಾಡಲು ಇತ್ತೀಚಿನ ದಿನಗಳಿಂದ ಯೋಜನೆ ಹಾಕಿದೆ. ಅದರ ಭಾಗವಾಗಿ ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್, ಲೇ ಆಫ್ ಇತ್ಯಾದಿಗಳು ನಡೆಯುತ್ತಿವೆ.
2023ರಲ್ಲಿ ಟೆಕ್ ಕ್ಷೇತ್ರದಲ್ಲಿ ಇದ್ದ ಟ್ರೆಂಡ್ನಂತೆ ಗೂಗಲ್ ಸಂಸ್ಥೆ ಆ ವರ್ಷ ಒಮ್ಮೆಗೇ 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತು. ಅದರ ನೂರಕ್ಕೆ ಆರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಆ ವರ್ಷ ಗೂಗಲ್ ಮಾತ್ರವಲ್ಲ, ಮೆಟಾ ಮತ್ತು ಅಮೇಜಾನ್ ಕಂಪನಿಗಳೂ ಕೂಡ ಸಾವಿರಾರು ಮಂದಿಯನ್ನು ಲೇ ಆಫ್ ಮಾಡಿದ್ದುವು.
2024 ಮತ್ತು ಈಗ 2025ರಲ್ಲೂ ಗೂಗಲ್ ಲೇ ಆಫ್ ಮಾಡಿದೆ. ಸಾವಿರಾರು ಸಂಖ್ಯೆಯಲ್ಲಲ್ಲವಾದರೂ, ನೂರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ.
