ಬೆಂಗಳೂರು
ಕೋರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಇಡೀ ಸಮಾಜ ಎದುರು ನೋಡುತ್ತಿದ್ದು, ಯಾವುದೇ ಅವಘಡಗಳಿಗೆ ಅವಕಾಶ ನೀಡದೇ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ಸಿದ್ಧತೆಯ ಕುರಿತಂತೆ ರಾಜ್ಯಾದ್ಯಂತ 31 ಜಿಲ್ಲಾ ಕೇಂದ್ರಗಳಿಗೆ ಕಳೆದ ಹದಿನೈದು ದಿನಗಳಲ್ಲಿ ಸುಮಾರು ಐದು ಸಾವಿರ ಕಿಲೋಮೀಟರ್ ಗಳಷ್ಟು ಸಂಚಾರ ಕೈಗೊಂಡು, ಸಭೆ ನಡೆಸಿ ನಿರ್ದೇಶನ ನೀಡಿರುವ ಸಚಿವ ಸುರೇಶ್ ಕುಮಾರ್, ಇಂದು ತಮ್ಮ ಅಭಿಯಾನದ ಕಡೆಯ ಭಾಗವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದರು.
ಉಚ್ಛ ನ್ಯಾಯಾಲಯದ ನಿರ್ದೇಶನದ ಅನುಸಾರ ನಡೆಯುತ್ತಿರುವ ಪರೀಕ್ಷೆಗಳು ಸಮಾಜಕ್ಕೆ ಭರವಸೆಯನ್ನು ಮೂಡಿಸುವ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆಯಾಗಬೇಕು, ಪರೀಕ್ಷೆಗಳು ನಡೆಯುತ್ತಿರುವ ಈ ವಿಶಿಷ್ಟ ಸಾಮಾಜಿಕ ಸಂದರ್ಭವನ್ನು ಪ್ರತಿಷ್ಠೆಯಾಗಿ ಪರಿಗಣಿಸದೇ ನಮ್ಮ ಸಾಮಾಜಿಕ ಬದ್ಧತೆಗೆ ಸವಾಲಾಗಿ ಪರಿಗಣಿಸಿ ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಪೋಷಕರ ನಿರೀಕ್ಷೆಗೆ ಅನುಗುಣವಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಸಬೇಕು. ಪರೀಕ್ಷೆಗೆ ಮುಂಚೆಯೇ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಸಹಕಾರದಿಂದ ಸ್ಯಾನಿಟೈಜ್ ಮಾಡಬೇಕು. ಪ್ರತಿ ದಿನದ ಪರೀಕ್ಷೆಯ ಬಳಿಕವೂ ಸ್ಯಾನಿಟೈಜ್ ಕ್ರಮಗಳನ್ನು ಅನುಸರಿಸಬೇಕೆಂದು ಅವರು ಸೂಚಿಸಿದರು.ಪ್ರಶ್ನೆ ಪತ್ರಿಕೆಯಾಧಾರಿತವಾದ ವಿಶೇಷ ಪುನರ್ಮನನ ತರಗತಿಗಳನ್ನು ಇದೇ ತಿಂಗಳ 12 ರಿಂದ 17 ರವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಗೆ ತನ್ನ ಸಂಪೂರ್ಣ ಸಹಕಾರ ನೀಡುತ್ತಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಭರವಸೆಯನ್ನು ಮೂಡಿಸುವ, ಮುಂದಿನ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಮಾಹಿತಿ ಕರಪತ್ರಗಳು, ವಿಡಿಯೋ ಸಂದೇಶಗಳನ್ನು ರಾಜ್ಯಾದ್ಯಂತ ಪ್ರತಿ ಪೋಷಕ, ವಿದ್ಯಾರ್ಥಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಶಿಕ್ಷಣ ಇಲಾಖೆಯ ಸಿಬ್ಬಂದಿಯು ಇಲಾಖೆಯ ಈ ಸದಾಶಯವನ್ನು ವಿದ್ಯಾರ್ಥಿ-ಪೋಷಕರಿಗೆ ತಲುಪಿಸುವ ವಾಹಕರಾಗಿ ಕಾರ್ಯ ನಿರ್ವಹಿಸಬೇಕು. ಒಟ್ಟಾರೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಶಿಕ್ಷಣ ಇಲಾಖೆ ಆಯುಕ್ತ ಡಾ.ಜಗದೀಶ್, ಬೆಂಗಳೂರುನಗರ ಹಾಗೂ ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಈ ಜಿಲ್ಲೆಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
