ಮಳೆಗಾಲದ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಚರ್ಚೆಗೆ

ನವದೆಹಲಿ:

     ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಿಳಿಸಿದ್ದಾರೆ.ಇಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ 2025 ರ ಮೇಲಿನ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್‌, ಫೆಬ್ರವರಿ 13 ರಂದು ಸದನದಲ್ಲಿ ಮಂಡಿಸಲಾದ ಹೊಸ ಆದಾಯ ತೆರಿಗೆ ಮಸೂದೆಯನ್ನು ಪ್ರಸ್ತುತ ಆಯ್ಕೆ ಸಮಿತಿ ಪರಿಶೀಲಿಸುತ್ತಿದೆ ಎಂದು ಹೇಳಿದರು.

    ಸಂಸತ್ತಿನ ಮುಂದಿನ ಮಳೆಗಾಲದ ಅಧಿವೇಶನದ ಮೊದಲ ದಿನದೊಳಗೆ ವರದಿ ಸಲ್ಲಿಸುವಂತೆ ಆಯ್ಕೆ ಸಮಿತಿಗೆ ಸೂಚಿಸಲಾಗಿದೆ. ನಾವು ಅದನ್ನು (ಹೊಸ ಆದಾಯ ತೆರಿಗೆ ಮಸೂದೆ) ಮಳೆಗಾಲದ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತೇವೆ” ಎಂದು ಸೀತಾರಾಮನ್ ತಿಳಿಸಿದರು.

    ಹಳೆಯ ಆದಾಯ ತೆರಿಗೆ ಕಾನೂನು ಡಿಜಿಟಲ್ ಸ್ವತ್ತುಗಳನ್ನು ಪರಿಶೀಲಿಸಲು ಕಾನೂನು ಬೆಂಬಲ ನೀಡುತ್ತಿರಲಿಲ್ಲ. ಇದೇ ಕಾರಣಕ್ಕೆ ಇದನ್ನೀಗ ಸೇರಿಸಲಾಗಿದೆ. ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಡಿಜಿಟಲ್ ಅಂಶಗಳ ಪರಿಶೀಲನೆಯನ್ನು ಸೇರಿಸಲಾಗಿದೆ” ಎಂದು ಸೀತಾರಾಮನ್ ಹೇಳಿದ್ದಾರೆ.ಸಂಸತ್ತಿನ ಮಳೆಗಾಲದ ಅಧಿವೇಶನವು ಸಾಮಾನ್ಯವಾಗಿ ಜುಲೈನಲ್ಲಿ ನಡೆಯುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರೆಯುತ್ತದೆ.

   ಆರು ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ 1961 ಅನ್ನು ಬದಲಾಯಿಸಲಾಗುತ್ತಿದ್ದು, ಡಿಜಿಟಲ್ ಯುಗಕ್ಕೆ ಬೇಕಾದ ಮಾರ್ಪಾಡುಗಳೊಂದಿಗೆ ಹೊಸ ಆದಾಯ ತೆರಿಗೆ ಮಸೂದೆ ಹೊರತರಲಾಗುತ್ತಿದೆ.