ಸಿಡ್ನಿ:
ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್ ಸರಣಿಯ ಕಳಪೆ ಪ್ರದರ್ಶನದ ಬೆನ್ನಲ್ಲೇ ಭಾರತದ ತಂಡದಲ್ಲಿ ಭಿನ್ನಮತ ತಲೆದೋರಿದೆ ಎಂದು ಕೆಲ ಮಾಧ್ಯಮ ವರದಿ ಅನುಸಾರ ಭಾರೀ ಚರ್ಚೆಗಳು ನಡೆದಿತ್ತು. ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ವಾತಾವರಣ ಹದಗೆಟ್ಟಿದ್ದು, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗಿತ್ತು. ಇದೀಗ ಈ ವಿಚಾರವಾಗಿ ಸ್ವತಃ ಕೋಚ್ ಗಂಭೀರ್ ಸ್ಪಷ್ಟನೆ ನೀಡಿದ್ದು ಈ ವರದಿಯನ್ನು ತಳ್ಳಿ ಹಾಕಿದ್ದಾರೆ.
ಶುಕ್ರವಾರದಿಂದ ಸಿಡ್ನಿಯಲ್ಲಿ ಆರಂಭಗೊಳ್ಳುವ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ನಮ್ಮ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣ ಹದಗೆಟ್ಟಿಲ್ಲ. ಉತ್ತಮವಾಗಿಯೇ ಇದೆ. ಕೇವಲ ವರದಿಗಳನ್ನು ಆಧಾರಿಸಿ ಆರೋಪ ಮಾಡುವುದು ಸರಿಯಲ್ಲ. ಅದು ಸತ್ಯವಲ್ಲ. ಹೀಗಾಗಿ ಈ ಸುಳ್ಳು ವರದಿಗಳಿಗೆ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಆಸ್ಟ್ರೇಲಿಯ ಸರಣಿಗೆ ಅನುಭವಿ ಚೇತೇಶ್ವರ ಪೂಜಾರ ಅವರನ್ನು ಆಯ್ಕೆ ಮಾಡುವಂತೆ ಗಂಭೀರ್ ಹಲವು ಬಾರಿ ಮನವಿ ಮಾಡಿದ್ದರು ಆದರೆ ಈ ಮನವಿಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಲಕ್ಷಿಸಿತ್ತು ಎಂದು ವರದಿಯಾಗಿತ್ತು. ಈ ಬಗ್ಗೆಯೂ ಮಾತನಾಡಿದ ಗಂಭೀರ್ ತಂಡವನ್ನು ಹೇಗೆ ಆಯ್ಕೆ ಮಾಡಬೇಕೆಂಬುದು ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ತಿಳಿದಿದೆ. ಅನಗತ್ಯ ಸುದ್ದಿಗಳ ಬಗ್ಗೆ ನಾನು ಉತ್ತರ ನೀಡಲ್ಲ ಎಂದರು.
ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಆಕಾಶ್‌ದೀಪ್ ಅವರು ಅಂತಿಮ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಆಕಾಶ್‌ದೀಪ್ ಅಲಭ್ಯತೆಯನ್ನು ಕೋಚ್ ಗಂಭೀರ್ ಖಚಿತಪಡಿಸಿದ್ದಾರೆ. ಆಕಾಶ್‌ದೀಪ್ ಅಲಭ್ಯತೆಯಲ್ಲಿ ಹರ್ಷಿತ್ ರಾಣಾ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು. ಪರ್ತ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ರಾಣಾ ಆಡಿದ್ದರು.
