ಮೀಸಲಾತಿ ಆಶ್ವಾಸನೆ ರಾಜ್ಯ ಸರ್ಕಾರ ತಕ್ಷಣವೇ ಈಡೇರಿಸಬೇಕು : ರಮೇಶ್ ಬಾಬು

ಬೆಂಗಳೂರು

    ಬಲಿಜ ಮತ್ತು ಅದರ ಉಪಪಂಗಡಗಳನ್ನು ಔದ್ಯೋಗಿಕ ಮತ್ತು ರಾಜಕೀಯ ಮೀಸಲಾತಿಗಾಗಿ ಹಾಲಿ ಇರುವ 3ಎ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ವರ್ಗಾಯಿಸುವ ಆಶ್ವಾಸನೆಯನ್ನು ರಾಜ್ಯ ಸರ್ಕಾರ ತಕ್ಷಣವೇ ಈಡೇರಿಸಬೇಕೆಂದು ಮಾಜಿ ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಒತ್ತಾಯಿಸಿದ್ದಾರೆ.

    ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಅವರು, 2018ರ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಬಲಿಜ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೆ 3ಎ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ವರ್ಗಾಯಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ. ತಾವು ದಯಮಾಡಿ ಹಿಂದುಳಿದ ವರ್ಗಗಳ ಇಲಾಖೆಯ ಮುಖಾಂತರ ಅಗತ್ಯ ವರದಿ ತಯಾರಿಸಿ 2ಎ ವರ್ಗದ ಮೀಸಲಾತಿ ಕಲ್ಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

     ಬಲಿಜ, ಬಲಿಜಿಗ, ನಾಯ್ಡು, ತೆಲುಗುಬಲಿಜ, ಶೆಟ್ಟಿ ಬಲಿಜ, ಕಾಪು, ಬಳೆಗಾರ ಹಾಗೂ ಇನ್ನಿತರ ಉಪಜಾತಿಗಳ ಅಭಿವೃದ್ಧಿಗಾಗಿ ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದು ಸ್ವಾಗತಾರ್ಹ. ವಿಧಾನಸಭಾ ಚುನಾವಣೆಗೆ ಇನ್ನೆರಡು ವಾರಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಸರ್ಕಾರ ಬಲಿಜ ಅಭಿವೃದ್ದಿ ನಿಗಮವನ್ನು ಆಡಳಿತಾತ್ಮಕವಾಗಿ ರಾಜ್ಯ ಸರ್ಕಾರದ ಅನುದಾನದ ಬಿಡುಗಡೆಯೊಂದಿಗೆ ಜಾರಿಗೊಳಿಸಬೇಕಾಗಿತ್ತು.

    ಅಭಿವೃದ್ಧಿ ನಿಗಮಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸ್ಥಳಾವಕಾಶ ಮಾಡಬೇಕಾಗಿತ್ತು. ಬಲಿಜ ಮತ್ತು ಅದರ ಸುಮಾರು 27 ಉಪಜಾತಿ/ ಉಪಪಂಗಡಗಳ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಕೂಡಲೇ 500 ಕೋಟಿ ರೂಪಾಯಿಗಳ ಅನುದಾನವನ್ನು ಆರ್ಥಿಕ ಇಲಾಖೆಯ ಏಕ ಅನುದಾನದ ಆದೇಶದ ಮೂಲಕ ಬಿಡುಗಡೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

   ಬಲಿಜ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಹಿರಿಯ ಕೆಎಸ್ ಶ್ರೇಣಿಯ ವ್ಯವಸ್ಥಾಪಕ ನಿರ್ದೇಶಕರು, ಅಗತ್ಯ ಆಡಳಿತ ಸಿಬ್ಬಂದಿಯನ್ನು ನಿಯೋಜನೆಯ ಮೂಲಕ ನೇಮಿಸಲು ಕ್ರಮ ಕೈಗೊಳ್ಳಲು ಕೋರುತ್ತೇನೆ. ಅಲ್ಲದೆ ಅಭಿವೃದ್ಧಿ ನಿಗಮ ಕಾರ್ಯ ಪ್ರವೃತ್ತವಾಗಲು ಬಹುಮಹಡಿ ಕಟ್ಟಡದಲ್ಲಿ ಅಥವಾ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಬಲಿಜ ಸಂಘದ ಕಟ್ಟಡದಲ್ಲಿ ಸ್ಥಳಾವಕಾಶ ಒದಗಿಸಿಕೊಟ್ಟು ಅನುದಾನ ಬಿಡುಗಡೆ ಮಾಡಿ ನಿಗಮವು ಚಟುವಟಿಕೆಗಳನ್ನು ಪ್ರಾರಂಭಿಸಲು ಅಗತ್ಯ ನಿರ್ದೇಶನ ನೀಡಬೇಕೆಂದು ರಮೇಶ್ ಬಾಬು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap