ತುಮಕೂರು :
ಸರ್ಕಾರಿ ನೌಕರರ ಪಾಲಿಗೆ ಈ ಭಾನುವಾರ ನುಂಗಲಾರದ ತುಪ್ಪವಾಗಿದೆ. ಅಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಇರುವುದರಿಂದ ಅನುಮತಿ ಇಲ್ಲದೆ ಯಾರೂ ರಜೆ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶ ಜಾರಿಯಾಗಿದೆ. ಈ ರೀತಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.
ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಆಯೋಜಿಸಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಮಾರು 70 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಗಾಗಿ ಈ ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ ಸರ್ಕಾರಿ ನೌಕರರು ಉಪಸ್ಥಿತರಿರಬೇಕು ಹಾಗೂ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಮುಖ್ಯವಾಗಿ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಯಾರೂ ರಜೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.
ಇಂದು ಮಾನವ ಸರಪಳಿ ಕಾರ್ಯಕ್ರಮದ ಅಂತಿಮ ಸಿದ್ಧತೆ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ, ರೂಪುರೇಷೆ ಮಾಡಲಾಗಿದೆ. ಮಾನವ ಸರಪಳಿ ರಚನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಆಗಿರುವುದರಿಂದ ಜಿಲ್ಲೆಯ ಪ್ರತಿಯೊಬ್ಬ ಸರ್ಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.
ಸೆಪ್ಟೆಂಬರ್ 14, 15 ಮತ್ತು 16ರಂದು ಸಾರ್ವತ್ರಿಕ ರಜೆ ಇದೆ ಎಂದು ಮುಂಚಿತವಾಗಿ ಯಾರಾದರೂ ರಜೆ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದರೆ, ಈಗಾಗಲೇ ಯಾವುದೇ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ರಜೆಗೆ ಹೋಗಿದ್ದರೆ, ಆಯಾ ಇಲಾಖೆಯ ಮೇಲಾಧಿಕಾರಿ ತಕ್ಷಣ ತಮ್ಮ ಸಿಬ್ಬಂದಿಗಳ ರಜೆ ರದ್ದುಪಡಿಸಿ ಅವರು ಮರಳಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.
ʼಯಾರಿಗೆ ಆಗಲಿ, ರಜೆ ಅನಿವಾರ್ಯವಾಗಿ ಅಗತ್ಯವಿದ್ದರೆ ಅವರು ನೇರವಾಗಿ ಸ್ವತಃ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಸಂಪರ್ಕಿಸಿ, ರಜೆಗೆ ಅನುಮತಿ ಪಡೆಯಬೇಕು. ಒಂದು ವೇಳೆ ಹಿರಿಯ ಅಧಿಕಾರಿ ಅನುಮತಿ ಮೇರೆಗೆ ಯಾರೇ ರಜೆ ಹೋಗಿದ್ದು ಕಂಡುಬಂದಲ್ಲಿ ರಜೆ ಮಂಜೂರು ಮಾಡಿದ್ದ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದಿದ್ದಾರೆ.
ಹಾಗಾಗಿ ಸೆಪ್ಟೆಂಬರ್ 14 ಮತ್ತು 15ರಂದು ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಮತ್ತು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿ ಯಾವುದೇ ರೀತಿಯಲ್ಲಿ ಕರ್ತವ್ಯಲೋಪವಾಗದಂತೆ ತಮಗೆ ವಹಿಸಿದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.
ಮಾನವ ಸರಪಳಿ ಕಾರ್ಯಕ್ರಮದಲ್ಲಿ ಏನಾದರೂ ತೊಂದರೆಯಾದರೆ ಅಥವಾ ಅಗತ್ಯ ಮಾಹಿತಿ ಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರಂಭಿಸಿರುವ ಸಹಾಯವಾಣಿ: 0836 2233840 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. ಹಾಗಾಗಿ ಈ ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಈ ವೀಕೆಂಡ್‌ನ ಭಾಗ್ಯವಿಲ್ಲ. ಜಿಲ್ಲಾಧಿಕಾರಿಯ ಆದೇಶದಿಂದಾಗಿ ರಜೆಯ ಮೂಡ್‌ನಲ್ಲಿದ್ದ ಸರ್ಕಾರಿ ಅಧಿಕಾರಿಗಳು ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗಿದೆ.