ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರಾಕ್ ಒಬಾಮಾ ಅವರು ನೀಡುವ ತಾರೀಖು ನೋಡಿಕೊಂಡು ಜಂಟಿ ಅಧಿವೇಶನ ದಿನಾಂಕ ನಿರ್ಣಯ ಮಾಡುತ್ತೇವೆ. ಮಹಾತ್ಮ ಗಾಂಧಿಜಿ ಅವರು ಕೇವಲ ಭಾರತದ ನಾಯಕನಲ್ಲ. ಮಹಾತ್ಮ ಗಾಂಧಿಜಿ ಅವರು ಜಗತ್ತಿನ ನಾಯಕ ಅಂತ ಸಾರುವ ಗಾಂಧಿ ಅನುಯಾಯಿ, ಅಭಿಮಾನಿಗೆ ಆಹ್ವಾನ ನೀಡಿದ್ದೇವೆ. ಇದೊಂದು ಉತ್ತಮವಾದ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು.
ಗಾಂಧೀಜಿ ಅವರು ಕರ್ನಾಟಕದ 120 ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಗಾಂಧೀಜಿ ಅವರು ಭೇಟಿ ನೀಡಿದ ರಾಜ್ಯದ 40 ಸ್ಥಳಗಳಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಬೇರೆ ಬೇರೆ ಜಿಲ್ಲೆಗಳು ರಥಯಾತ್ರೆಯ ಜ್ಯೋತಿಗಳು ಡಿಸೆಂಬರ್ 26 ಮತ್ತು 27ಕ್ಕೆ ಬೆಳಗಾವಿಗೆ ತಲುಪಲಿವೆ. ಯುವ, ಮಹಿಳಾ, ಸಾಮರಸ್ಯ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮಹಾತ್ಮ ಗಾಂಧಿಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಎಐಸಿಸಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಈ ಸಭೆಯ ಮುಖಾಂತರ ಮಹಾತ್ಮ ಗಾಂಧಿಜಿಯವರು ಸರ್ವರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಅಂತ ಕರೆ ಕೊಟ್ಟರು. ಗಾಂಧಿಜಿ ಅವರ ಕರೆಯಿಂದ ಅನೇಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು.
ಗಾಂಧೀಜಿ ಅಧ್ಯಕ್ಷತೆ ವಹಿಸಿದ ಸಭೆಯ ಶತಮಾನೋತ್ಸವ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದ ಸಭೆ ಬಹಳ ಮಹತ್ವದ್ದಾಗಿದೆ. ಗದಗ ಜಿಲ್ಲೆಯವರಿಗೆ ಇನ್ನೂ ಬಹಳ ಮಹತ್ವದ್ದಾಗಿದೆ. ಹುಯಿಲಗೋಳ ನಾರಾಯಣರಾಯರು ಬರೆದ “ಉದಯವಾಗಲಿ ಚೆಲುವ ಕನ್ನಡನಾಡು” ಗೀತೆ ಮೊಟ್ಟಮೊದಲ ಬಾರಿಗೆ ಈ ಸಭೆಯಲ್ಲಿ ಹಾಡಲಾಗಿತ್ತು. ಈ ಹಾಡನ್ನು ಗಂಗೂಬಾಯಿ ಹಾನಗಲ್ ಅವರು ಹಾಡಿದ್ದರು. ಗಾಂಧೀಜಿ ತತ್ವ, ಸಿದ್ಧಾಂತಗಳು ಯುವಕರ ಮನಕ್ಕೆ ತಲಪುವ ದೊಡ್ಡ ಪ್ರಯತ್ನ ಮಾಡಬೇಕಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು (ಹೆಚ್ಕೆ ಪಾಟೀಲ್) ಶತಮಾನೋತ್ಸವ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಸಮಿತಿ ಮಂಗಳವಾರ (ನ.5) ರಂದು ಬೆಳಗಾವಿಗೆ ಭೇಟಿ ನೀಡಲಿದೆ. 2025ರ ಅಕ್ಟೋಬರ್ 2 ರವರೆಗೆ ಶತಮಾನೋತ್ಸವ ಮಾಡಲಾಗುತ್ತದೆ ಎಂದು ಹೇಳಿದರು.