‘ಕೇಸರಿ ವಸ್ತ್ರಧಾರಿಗಳ ಆಟ ಶಿರಾ ಕ್ಷೇತ್ರದಲ್ಲಿ ನಡೆಯುವುದಿಲ್ಲ’ – ಎಚ್.ಡಿ.ಕೆ

ಶಿರಾ : 

      ಶಿರಾ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಒಂದು ಭಾವನಾತ್ಮಕ ಸಂಬಂಧವಿದೆ. ಈ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಪ್ರಾಮಾಣಿಕತೆಗೆ ನಮ್ಮ ಇಡೀ ಕುಟುಂಬ ನಿಜಕ್ಕೂ ತಲೆ ಬಾಗಿದ್ದು ಹಣದ ತೈಲಿಯನ್ನು ಹಿಡಿದು ಚುನಾವಣೆ ಗೆಲ್ಲಲು ಬಂದ ಕೇಸರಿ ವಸ್ತ್ರಧಾರಿ ಧುರೀಣರ ಹಣದ ಆಮಿಷದ ಆಟ ಈ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

      ಶಿರಾ ನಗರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಬಿ.ಸತ್ಯನಾರಾಯಣ್ ಪರ ಮತ ಯಾಚನೆಗಾಗಿ ಭಾನುವಾರ ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು, ಬರಗೂರು ರಾಮಚಂದ್ರಪ್ಪ ಬಯಲು ರಂಗ ಮಂದಿರದ ಆವರಣದಲ್ಲಿ ನಡೆದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

      ಈ ಕ್ಷೇತ್ರದ ಯಾದವರು, ದಲಿತರು, ಅಲ್ಪಸಂಖ್ಯಾತರು, ಮಡಿವಾಳರು, ಬಲಿಜರು ಸೇರಿದಂತೆ ಅತ್ಯಂತ ತಳ ಸಮುದಾಯದ ಜನ ನಮ್ಮ ಪಕ್ಷವನ್ನು ಉಳಿಸಿ ಬೆಳೆಸಿದ್ದೀರಿ. ನಿಮ್ಮಗಳ ಆಶೀರ್ವಾದದಿಂದಲೆ ಇಂದಿಗೂ ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾಗಿ ಉಳಿಯಲು ಸಾಧ್ಯವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪ್ರಬಲ ಸ್ಪರ್ಧೆಯನ್ನು ಒಡ್ಡಿದೆ. ಇಂದು ನಡೆದ ರ್ಯಾಲಿಯಲ್ಲಿ ಶಿರಾಕ್ಕೆ ಹರಿದು ಬಂದ ಸಹಸ್ರಾರು ಕಾರ್ಯಕರ್ತರನ್ನು ಕಂಡು ವಿರೋಧ ಪಕ್ಷಗಳು ಕೂಡ ನಡುಗಿವೆ. ನಿಮ್ಮ ಇಂತಹ ಅಭೂತಪೂರ್ವ ಬೆಂಬಲಕ್ಕೆ ಪಕ್ಷ ಚಿರಋಣಿಯಾಗಿದೆ ಎಂದರು.

     ಶಿರಾ ಉಪ ಚುನಾವಣೆ ಗೆಲ್ಲಲೇಬೇಕೆಂಬ ಹಠದಿಂದ ಬಿಜೆಪಿ ಹಣದ ಹೊಳೆ ಹರಿಸಿದೆ. ಶನಿವಾರ ಪೋಲೀಸ್ ಇಲಾಖೆಯ ವಾಹನದಲ್ಲಿಯೇ 6 ಕೋಟಿ ರೂ.ಗಳಷ್ಟು ಹಣದ ಮೂಟೆಯನ್ನು ಶಿರಾ ಕ್ಷೇತ್ರಕ್ಕೆ ಬಿಜೆಪಿ ತಂದಿದೆ. ಒಬ್ಬ ಅಧಿಕಾರಿಯೇ ನನಗೆ ದೂರವಾಣಿ ಮಾಡಿ ಈ ವಿಷಯ ತಿಳಿಸಿದ್ದಾರೆ. ಕೆ.ಆರ್.ಪೇಟೆಯಂತೆ ಇಲ್ಲಿನ ಚುನಾವಣೆ ಗೆಲ್ಲುವುದು ನಿಮ್ಮ ಭ್ರಮೆ. ಗೆದ್ದಿದ್ದೇವೆ ಎಂಬ ದುರಹಂಕಾರ ಬೂತ್ ಒಡೆದಾಗ ತಿಳಿಯುತ್ತದೆ ಎಂದು ಬಿಜೆಪಿಯ ವಾಮ ಮಾರ್ಗದ ಬಗ್ಗೆ ಕುಮಾರಸ್ವಾಮಿ ಕಿಡಿ ಕಾರಿದರು.

      ಈ ಜೀವನದಲ್ಲಿ ನನಗೆ ನೆಮ್ಮದಿ ತಂದದ್ದು ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದ 15 ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲಿ ಮಾಡಿದ ಸಾಲ ಮನ್ನಾ ಯೋಜನೆ. ಉ.ಕರ್ನಾಟಕದ ಕ್ಷೇತ್ರಗಳಾದ ಗೋಕಾಕ್‍ನಲ್ಲಿ 35,000 ಕುಟುಂಬಗಳು, ಕಾಗೋಡು ಕ್ಷೇತ್ರದಲ್ಲಿ 22,000 ಕುಟುಂಬ, ಅಥಣಿಯಲ್ಲಿ 22,000 ಕುಟುಂಬಗಳಿಗೆ ಸಾಲಮನ್ನಾ ಯೋಜನೆ ದೊರೆತಿದೆ. ಈ ಕ್ಷೇತ್ರದ ಜನ ನಮಗೆ ಮತ ಚಲಾಯಿಸುವುದಿಲ್ಲ ಎಂಬ ಭಾವನೆಯೂ ನಮ್ಮಲ್ಲಿ ಇರಲಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

      2002ರಲ್ಲಿ ದೇವೇಗೌಡರು ಕನಕಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಅವರಲ್ಲಿ ನಯಾ ಪೈಸೆ ಹಣ ಇರಲಿಲ್ಲ. ಅಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವಾಮ ಮಾರ್ಗದಲ್ಲಿ ಚುನಾವಣೆ ನಡೆಸಿದರು. ಆಗ ಅಲ್ಲಿ ಕಳ್ಳ ಮತದಾನವೂ ನಡೆಯಿತು. ಅಂತಹ ಕಳ್ಳ ಮತದಾನ ಶಿರಾದಲ್ಲೂ ನಡೆಯಬಹುದು. ನಮ್ಮ ಕಾರ್ಯಕರ್ತರು ಪ್ರತಿ ಬೂತ್‍ಗಳಲ್ಲೂ ಎಚ್ಚರಿಕೆಯಿಂದ ಇರಿ ಎಂದು ಪಕ್ಷದ ಕಾರ್ಯಕರ್ತರನ್ನು ಎಚ್ಚರಿಸಿದರು.

      ಮದಲೂರು ಕೆರೆಯನ್ನು ಮುಂದು ಮಾಡಿಕೊಂಡು ಚುನಾವಣೆ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಮತ ಕೇಳುವ ಅರ್ಹತೆಯೇ ಇಲ್ಲ. ಮದಲೂರು ಯೋಜನೆಯನ್ನು ಸ್ಥಗಿತಗೊಳಿಸಲು ಆದೇಶ ಮಾಡಿದ್ದ ಮುಖ್ಯಮಂತ್ರಿಗಳು ಮೊನ್ನೆ ಅದೇ ಮದಲೂರು ಕಾರ್ಯಕ್ರಮದಲ್ಲಿ 6 ತಿಂಗಳೊಳಗೆ ಹೇಮಾವತಿ ಹರಿಸುವುದಾಗಿ ಹೇಳುತ್ತಿದ್ದಾರೆ. 6 ತಿಂಗಳೊಳಗೆ ನೀರು ಹರಿಸದಿದ್ದರೆ ಮದಲೂರಿನಿಂದ ವಿಧಾನಸೌಧದವರೆಗೂ ನಾವು ಪಾದಯಾತ್ರೆ ಮಾಡುತ್ತೇವೆ ಎಂದರು.

      ರಾಜಕೀಯ ಮೀಸಲಾತಿ ಈ ಹಿಂದೆ ಕೆಲವರ ಕಪಿಮುಷ್ಠಿಯಲ್ಲಿತ್ತು. ಆ ಮೀಸಲಾತಿ ಸೌಲಭ್ಯ ನೀಡಿದ ಕೀರ್ತಿ ದೇವೇಗೌಡರದ್ದು. ಕಳೆದ 15 ದಿನಗಳಿಂದ ನಮ್ಮ ಇಡೀ ಕುಟುಂಬ ಹಳ್ಳಿ ಹಳ್ಳಿಗಳಲ್ಲೂ ಓಡಾಡಿದ್ದು, ಈ ಭಾಗದ ಜನರ ಸಂಕಷ್ಟ ನಮಗೆ ಸಂಪೂರ್ಣ ಅರಿವಾಗಿದೆ. ಜನರ ಕಷ್ಟದ ಬದುಕನ್ನು ಕಂಡು ನಮಗೂ ನೋವಾಗಿದೆ. ಅಮ್ಮಾಜಮ್ಮ ನಮ್ಮ ಅಭ್ಯರ್ಥಿ, ಅವರು ಶಾಸಕಿಯಾಗುವುದು ಖಚಿತ. ಅವರ ಆಯ್ಕೆ ನಂತರ ನಾವು ಇತ್ತ ತಲೆ ಹಾಕಿ ಮಲಗುವುದಿಲ್ಲವೆಂಬ ಭಾವನೆ ಬೇಡ. ನಾನು ಮತ್ತು ರೇವಣ್ಣ ಇಬ್ಬರೂ ಪ್ರತಿ ತಿಂಗಳಿಗೊಮ್ಮೆ ಶಿರಾ ಕ್ಷೇತ್ರದಲ್ಲಿ ದಿನವಿಡೀ ಇರುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link