ಧಾರವಾಡ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೆಸ್ಕಾಂ ಶಾಕ್….!

ಧಾರವಾಡ

    ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ನಿತ್ಯ ನೂರಾರು ಜನ ಕೆಲಸಕ್ಕೆ ಬರುತ್ತಾರೆ. ಯಾವುದೇ ನೋಂದಣಿ, ಮತ್ತಿತರೆ ದಾಖಲಾತಿ ಕೆಲಸ ಇದ್ದರೆ ಅವುಗಳೆಲ್ಲವೂ ಆನ್​ಲೈನ್ ಹಾಗೂ ಕಂಪ್ಯೂಟರ್ ಆಧಾರಿತವಾಗಿಯೇ ನಡೆಯಬೇಕು. ಆದರೆ ಈಗ ಈ ಉಪನೋಂದಣಾಧಿಕಾರಿ ಕಚೇರಿ ಕೆಲಸವೇ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಇದಕ್ಕೆ ಕಾರಣ ವಿದ್ಯುತ್ ಸಂಪರ್ಕ ಕಡಿತ.

   ಸುಮಾರು ಆರು ತಿಂಗಳಿನಿಂದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿರುವುದರಿಂದ ಹೆಸ್ಕಾಂ ಸಿಬ್ಬಂದಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ವಿದ್ಯುತ್ ಪ್ಯೂಸ್‌ ಕಿತ್ತುಕೊಂಡು ಹೋಗಿದ್ದಾರೆ. ಇತ್ತ ಕಚೇರಿಯಲ್ಲಿರುವ ಜನರೇಟರ್ ಸಹ ಕೆಲಸ ಮಾಡುತ್ತಿಲ್ಲ. ಹೀಗಾಗಿ ಜನ ಕಾಯುತ್ತಾ ನಿಲ್ಲುವಂತಾಗಿದ್ದು, ಯಾವುದೇ ಕೆಲಸಗಳು ನಡೆಯುತ್ತಿಲ್ಲ.

   ಆಸ್ತಿ ನೋಂದಣಿ, ಖರೀದಿ, ಬೋಜಾ, ವಿವಾಹ ನೋಂದಣಿ ಸೇರಿದಂತೆ ಎಲ್ಲವೂ ಈಗ ನಿಂತಿದೆ. ಇತ್ತೀಚೆಗೆ ಸರ್ಕಾರ ಮುದ್ರಾಂಕ ಸೇರಿ ಎಲ್ಲ ನೋಂದಣಿ ಶುಲ್ಕಗಳನ್ನು ಹೆಚ್ಚಿಸಿದೆ. ಆದರೂ ಈ ಕಚೇರಿಗೆ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಿದೆ. ಹೀಗಾಗಿ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

   ಮಾಧ್ಯಮದವರು ಕಚೇರಿಗೆ ಹೋಗುತ್ತಿದ್ದಂತೆಯೇ ಜನರೇಟರ್ ಅನ್ನು ತಾತ್ಕಾಲಿಕ ರಿಪೇರಿ ಮಾಡಿಸಿ, ಕೆಲಸವನ್ನು ಆರಂಭ ಮಾಡಿಸಿದ್ದಾರೆ. ಆದರೆ ಅದರಿಂದ ಸರಿಯಾದ ರೀತಿಯಲ್ಲಿ ಕೆಲಸ ಸಾಗುತ್ತಿಲ್ಲ. ಏಕೆಂದರೆ ಕಚೇರಿಯಲ್ಲಿರುವ ಬ್ಯಾಟರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಜನರೇಟರ್ ಶುರು ಮಾಡಿದರೂ ಕೆಲಸ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. 

   ಒಟ್ಟು 1.30 ಲಕ್ಷ ರೂಪಾಯಿ ಬಿಲ್ 6 ತಿಂಗಳಿನಿಂದ ಬಾಕಿ ಇದೆ. ಎರಡು ತಿಂಗಳ ಹಿಂದೆ 83 ಸಾವಿರ ರೂಪಾಯಿ ಬಿಲ್ ಕಟ್ಟಿದ್ದೇವೆ. ಆದರೆ ಆ ಬಳಿಕ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ ಬಿಲ್ ಪಾವತಿಸಲು ಆಗಿಲ್ಲ ಎಂದು ಹಿರಿಯ ಉಪನೋಂದಣಾಧಿಕಾರಿ ಲಕ್ಷ್ಮೀಕಾಂತ್ ಲಕ್ಕುಂಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

   ಸರ್ಕಾರ ಇತ್ತೀಚೆಗೆ ಎಷ್ಟೋ ಸರ್ಕಾರಿ ಕಚೇರಿಗಳಿಗೆ ನಿರ್ವಹಣಾ ವೆಚ್ಚದ ಮೊತ್ತ ಕೊಡುವುದನ್ನೇ ಕಡಿಮೆ ಮಾಡಿದೆ. ಅದರ ಪರಿಣಾಮವೇ ಈಗ ವಿದ್ಯುತ್ ಬಿಲ್ ಪಾವತಿಗೂ ಸರ್ಕಾರಿ ಕಚೇರಿಗಳ ಖಾತೆಯಲ್ಲಿ ಹಣ ಇಲ್ಲದಂತಾಗಿದೆ.‌ ಇನ್ನು ಉಪನೋಂದಣಾಧಿಕಾರಿ ಕಚೇರಿ ಅಂದರೆ ಸಾಕಷ್ಟು ಆದಾಯ ಬರುವ ಕಚೇರಿ. ಆದರೆ ವಿವಿಧ ಶುಲ್ಕದ ರೂಪದಲ್ಲಿ ಬರುವ ಹಣವನ್ನು ಈ ಕಚೇರಿ ನೇರವಾಗಿ ಸರ್ಕಾರಕ್ಕೆ ತುಂಬಬೇಕು.

   ಬಳಿಕ ಸರ್ಕಾರ ಅನುದಾನ ಕೊಟ್ಟಾಗಲೇ ಕಚೇರಿ ನಡೆಸಬೇಕು. ಆದರೆ ಈ ಕಚೇರಿಯಿಂದ ಬರುವ ಆದಾಯ ತೆಗೆದುಕೊಳ್ಳುತ್ತಿರುವ ಸರ್ಕಾರ, ಈ ಕಚೇರಿ ವಿದ್ಯುತ್ ಬಿಲ್​ಗೆ ಅನುದಾನ ಕೊಡಲು ಮಾತ್ರ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ನಿಜಕ್ಕೂ ವಿಪರ್ಯಾಸವೇ ಸರಿ.

Recent Articles

spot_img

Related Stories

Share via
Copy link