PSI ನೇಮಕಾತಿ ಮರುಪರೀಕ್ಷೆ : ಅಸ್ತು ಎಂದ ಹೈಕೋರ್ಟ್

ಬೆಂಗಳೂರು: 

     PSI ನೇಮಕಾತಿ ಮರು ಪರೀಕ್ಷೆಗೆ ಆದೇಶಿಸಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಮರುಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಆದರೆ ಸ್ವತಂತ್ರ ಸಂಸ್ಥೆ ಮೂಲಕ ಮರುಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. 

    545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆ ಮತ್ತು ಬಳಿಕ ಪ್ರಕಟಿಸಿದ ನೇಮಕಾತಿ ಪಟ್ಟಿಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತೆಯನ್ನು ತರಲು ರಾಜ್ಯ ಸರ್ಕಾರವು ಸ್ವತಂತ್ರ ಏಜೆನ್ಸಿಯ ಮೂಲಕ ಹೊಸದಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಹೇಳಿದೆ.

    ಪಿಎಸ್‌ಐಗಳ ನೇಮಕಾತಿಗೆ ನಡೆದ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ 2022ರ ಏಪ್ರಿಲ್ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಮರುಪರೀಕ್ಷೆ ಬೇಡ, ಕಳಂಕಿತರನ್ನು ಹೊರತುಪಡಿಸಿ ನೇಮಕಾತಿ ಪಟ್ಟಿಯನ್ನು ಪ್ರಕಟಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿದ್ದ ಅಭ್ಯರ್ಥಿಗಳ ಪರ ದಾವೆಯನ್ನು ತಿರಸ್ಕರಿಸಿದೆ. 

    ಸೆಪ್ಟೆಂಬರ್ 28, 2022 ರಂದು ನ್ಯಾಯಾಲಯವು ಅರ್ಜಿದಾರರ ವಿಚಾರಣೆಯ ನಂತರ ಏಪ್ರಿಲ್ 29, 2022 ರ ಆದೇಶದ ಅನ್ವಯ ಲಿಖಿತ ಪರೀಕ್ಷೆಯನ್ನು ನಡೆಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು .ಏಪ್ರಿಲ್ 10, 2023 ರ ಆದೇಶವನ್ನು ಅನುಸರಿಸಿ, ಪೊಲೀಸ್ ವರಿಷ್ಠಾಧಿಕಾರಿ, ಹಣಕಾಸು ಗುಪ್ತಚರ ಘಟಕ, ಸಿಐಡಿ, ಬೆಂಗಳೂರು, ಅದರ ಡಿಟೆಕ್ಟಿವ್ ಇನ್ಸ್‌ಪೆಕ್ಟರ್ ಶಿವಪ್ರಸಾದ್ ಅವರು ನ್ಯಾಯಾಲಯಕ್ಕೆ ಮುಚ್ಚಿದ ಕವರ್‌ನಲ್ಲಿ ವರದಿಯನ್ನು ಸಲ್ಲಿಸಿದ್ದರು. 

    ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಬಿಜೆಪಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸಬೇಕು.

    ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ ನೂರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕೆಲವು ದಿನಗಳ ಹಿಂದೆ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪನ್ನು ನವೆಂಬರ್‌ 10ಕ್ಕೆ ನಿಗದಿ ಮಾಡಿತ್ತು.

    ಪಿಎಸ್‌ಐ ನೇಮಕಾತಿಯ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರು ಪರೀಕ್ಷೆ ನಡೆಸಲು ಉದ್ದೇಶಿಸಿರುವ ತೀರ್ಮಾನದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು ಎಂದು ಪೀಠವು ಆಗಸ್ಟ್‌ 4ರ ವಿಚಾರಣೆಯಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಹೊರತುಪಡಿಸಿ ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಲು ಏಕೆ ಸಾಧ್ಯವಿಲ್ಲ ಎಂಬುದಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರ್ಕಾರವು ಪೀಠಕ್ಕೆ ಸಲ್ಲಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap