ಹುಳಿಯಾರು :
ಪಟ್ಟಣದಲ್ಲಿ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಬಯಲು ಕುಡಿತ ಹೆಚ್ಚಿದೆ. ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಿ ಬಯಲಲ್ಲೇ ಕುಡಿದು ತೂರಾಡುವವರ ಸಂಖ್ಯೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಳಿಗ್ಗೆ 6 ಗಂಟೆಗೆ ಬಾರ್ ಬಾಗಿಲು ತೆರೆಯಲು ಅನುಮತಿ ಕೊಟ್ಟಿರುವುದರಿಂದ ಬೆಳಿಗ್ಗೆ 5 ಗಂಟೆಯಿಂದಲೆ ಕಾಯ್ದು ಮದ್ಯ ಖರೀದಿಸುತ್ತಿದ್ದಾರೆ. ಖರೀದಿಸಿದ ಮದ್ಯ ಸೇವನೆಗೆ ಸ್ಥಳವಕಾಶ ಸಿಗದೆ ಬಾರ್ ಸಮೀಪದ ಬಾವಿ ಕಟ್ಟೆ ಮತ್ತು ಕೆರೆ ಏರಿಯ ಭೈರವ ದೇವಸ್ಥಾನದ ಬಳಿ ಕುಡಿಯುತ್ತಿದ್ದಾರೆ. ಬಸ್ ನಿಲ್ದಾಣ ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ರಾಜಾರೋಷವಾಗಿ ಕುಡಿಯುತ್ತಿದ್ದರೂ ಕ್ರಮ ಕೈಗೊಳ್ಳದಿದ್ದರಿಂದ ಬಯಲ ಕುಡಿತ ಮೇರೆ ಮೀರಿದೆ.
ಕೊರೋನಾ ಮೊದಲ ಅಲೆ ಸಂದರ್ಭದಲ್ಲಿ ಡಾಬಾಗಳಲ್ಲಿ ಮದ್ಯ ಮಾರಾಟಕ್ಕೆ ತೆರೆ ಎಳೆಯಲಾಗಿತ್ತು. ಬಾರ್‍ಗಳಲ್ಲೂ ಸಹ ಪಾಸರ್ಲ್‍ಗೆ ಮಾತ್ರ ಅವಕಾಶ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಬಯಲು ಕುಡುಕರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಈ ಸಂದರ್ಭದಲ್ಲಿ ಕುಡುಕರು ಬಯಲಿಗೆ ಬಂದಿದ್ದರು. ಈಗ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸಿದ್ದ ಪರಿಣಾಮ ಬಯಲು ಕುಡಿತ ಸಾರಗವಾಗಿ ನಡೆಯುತ್ತಿದೆ. ಬಯಲು ಕುಡುಕರು ಮದ್ಯದೊಂದಿಗೆ ನೀರಿನ ಬಾಟಲ್ ತಂದು ಕುಡಿದ ಬಳಿಕ ಎಲ್ಲ ವಸ್ತುಗಳನ್ನೂ ಅಲ್ಲೇ ಬಿಟ್ಟು ತೆರಳುತ್ತಿದ್ದಾರೆ.
ಕೆರೆಯ ಏರಿಯ ಮೇಲಿನ ಭೈರವ ದೇವಸ್ಥಾನದ ಬಳಿ ಬಯಲು ಕುಡಿತ ಏರಿ ಮೇಲೆ ಓಡಾಡುವ ಮಹಿಳೆಯರು ಮತ್ತು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಕುಡಿದು ಕಿತ್ತಾಡುವ, ಅಶ್ಲೀಲ ಸಂಭಾಷಣೆ ನಡೆಸುವ ಯುವತಿಯರನ್ನು ಚುಡಾಯಿಸುವ ಪ್ರಕರಣಗಳೂ ನಡೆಯುತ್ತಿವೆ. ಇಂತಹ ಅನಾಗರಿಕ ವಾತಾವರಣ ನಿರ್ಮಾಣ ಮಾಡಿರುವ ಬಯಲು ಕುಡಿತವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಟ್ಟಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
