ಚಿಕ್ಕಮಗಳೂರು
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ವಂಚಿತ ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬುಧವಾರ ತಡರಾತ್ರಿ ಬಿಡುಗಡೆಯಾಗಿದ್ದು, ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪಿತ್ತು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಟಿಕೆಟ್ ಹಾಲಿ ಶಾಸಕ ಹಾಗೂ ಮೂರು ಬಾರಿ ಗೆಲುವು ಸಾಧಿಸಿದ್ದ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಎಂದು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದರು. ವಿಜಯ ಸಂಕಲ್ಪ ಯಾತ್ರೆ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ರಸ್ತೆ ಮಧ್ಯೆಯೇ ತಡೆದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಸಿ.ಟಿ. ರವಿ ಹಾಗೂ ಎಂ.ಕೆ. ಪ್ರಾಣೇಶ್ ಮನೆಗೆ ತೆರಳಿದ್ದ ಸಾವಿರಾರು ಕಾರ್ಯಕರ್ತರು ಕುಮಾರಸ್ವಾಮಿಗೆ ಟಿಕೆಟ್ ಕೊಡಬೇಡಿ ಎಂದು ಮನವಿ ಮಾಡಿದ್ದರು.
ಕಾರ್ಯಕರ್ತರ ಮನವಿಯಂತೆ ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪಿದ್ದು ಬಿಜೆಪಿ ಕಾರ್ಯಕರ್ತ ದೀಪಕ್ ದೊಡ್ಡಯ್ಯ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದೆ. ಇದರಿಂದ ಬೇಸರಗೊಂಡಿರುವ ಎಂ.ಪಿ.ಕುಮಾರಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನು ಟಿಕೆಟ್ ನೀಡದ ಬಿಜೆಪಿ ಹೈ ಕಮಾಂಡ್ ವಿರುದ್ಧ ಅಸಮಧಾನಗೊಂಡಿದ್ದ ಎಂ.ಪಿ. ಕುಮಾರಸ್ವಾಮಿ ಬೆಂಬಲಿಗರಿಗೆ ಸಂದೇಶವೊಂದನ್ನು ತಿಳಿಸಿದ್ದರು. ‘ನಾನೆಂದು ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ, ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡಿದ್ದು ಹೈಕಮಾಂಡ್ ಗೇ ತಪ್ಪಾಗಿ ಕಂಡಿದ್ದು ಪರಮಾಶ್ಚರ್ಯ. ಸರ್ವೇ ಆಧರಿಸಿ ಟಿಕೆಟ್ ನೀಡುವ ಪಕ್ಷ ಪ್ರತಿ ಸರ್ವೇಯಲ್ಲಿ ಮುನ್ನಡೆಯಿದ್ದರು, ಟಿಕೆಟ್ ನಿರಾಕರಿಸಿದ್ದು ನೋವಿನ ವಿಚಾರ. ಮಳೆಯಿಂದಾಗಿ ಬೆಳೆ ಕಳೆದುಕೊಂಡ ಕ್ಷೇತ್ರದ ರೈತ ಭಾಂದವರಿಗೋಸ್ಕರ ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಏಕಾಂಗಿಯಾಗಿ ಧರಣಿ ಕುಳಿತಿದ್ದು ಹೈ ಕಮಾಂಡ್‌ಗೆ ತಪ್ಪು ಅನ್ನಿಸಿದ್ದು ಇನ್ನೂ ಪರಮಾಶ್ಚರ್ಯ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
