ನಾನು 24 ಕ್ಯಾರೆಟ್ Gold: ಸಂಪುಟದಿಂದ ಕಿತ್ತು ಹಾಕಲು ಸಾಧ್ಯವಿಲ್ಲ; ಜೋಶಿಗೆ ಜಮೀರ್ ತಿರುಗೇಟು

ಹುಬ್ಬಳ್ಳಿ: 

   ನಾನು ಒಂದು ಸಮುದಾಯದ ಪರವಾಗಿ ರಾಜಕಾರಣ ಮಾಡಲ್ಲ. ನನಗೆ ಎಲ್ಲರೂ ಬೇಕು.ನಾನು ಭಾರತೀಯ. 24 ಕ್ಯಾರೆಟ್ ಚಿನ್ನ. ಕೋಮು ದ್ವೇಷ ಹರಡುವ ಕೆಲಸವನ್ನು ಎಂದೂ ಮಾಡಿಲ್ಲ ಎಂದು ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

   ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೋಶಿ ಅವರ ರೀತಿ ಒಲೈಕೆ ರಾಜಕಾರಣ ಮಾಡಲ್ಲ. ಮೊದಲು ನಾನೊಬ್ಬ ಭಾರತೀಯ. ನಂತರ ರಾಜಕಾರಣಿ. ನನಗೆ ಎಲ್ಲಾ ಜನಾಂಗದವರು ಬೇಕು. ಯಾವುದೇ ಕಾರಣಕ್ಕೂ ಜಾತಿ ರಾಜಕಾರಣ ಮಾಡುತ್ತಿಲ್ಲ , ಪ್ರಲ್ಹಾದ ಜೋಶಿ ಅವರಿಗೆ ಹಿಂದೂ, ಮುಸ್ಲಿಂ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ಗೊತ್ತಿಲ್ಲ. ನನ್ನನ್ನ ಸಂಪುಟದಿಂದ ಕಿತ್ತು ಹಾಕಲು ಸಾಧ್ಯವಿಲ್ಲ’ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿರುಗೇಟು ನೀಡಿದರು.

  ಭಾರತದಲ್ಲಿ ಇರುವವರೆಲ್ಲರೂ ಭಾರತೀಯರು. ಪ್ರಲ್ಹಾದ ಜೋಶಿ ಅವರು ರಾಜಕೀಯದಲ್ಲಿ ಜಾತಿ ಮಾಡಬಾರದು. ಮಾಡುವುದಿದ್ದರೆ ಮನೆಯಲ್ಲಿ ಮಾಡಿಕೊಳ್ಳಲಿ ಎಂದು ಹೇಳಿದರು. ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ವಿರೋಧ ಮಾಡುತ್ತಾರೆ. ಮತ ಹಾಕಿದರೆ ಮಾತ್ರ ನಾವು ಒಳ್ಳೆಯವರು. ಇಲ್ಲದಿದ್ದರೆ ಈ ರೀತಿ ಮಾತನಾಡುತ್ತಾರೆ ಎಂದರು. ರೈತರು ಅನ್ನದಾತರು. ಅವರ ಆಸ್ತಿಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾನೂನು ಇದ್ದು ಯಾರ ಆಸ್ತಿಯನ್ನು ಯಾರೂ ಕಿತ್ತುಕೊಳ್ಳಲು ಬರುವುದಿಲ್ಲ. ರಾಜ್ಯದಲ್ಲಿ ಉಪ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವಿಷಯವನ್ನು ಬಿಜೆಪಿಯವರು ಮುನ್ನೆಲೆಗೆ ತಂದಿದ್ದಾರೆ, ರಾಜಕೀಯ ಮಾಡುತ್ತಿದ್ದಾರೆ ಎಂದು‌ ಟೀಕಿಸಿದರು. 

  ಮುಜರಾಯಿ ವಕ್ಫ್ ಎರಡೂ ಒಂದೇ. ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ. ಅಲ್ಲಾ ನಮ್ಮ ನಂಬಿಕೆ, ಜೋಶಿ ಏನಾದರೂ ಹೇಳಲಿ. ನಾನು ಮೊದಲು ಹಿಂದೂಸ್ತಾನಿ. ಆಮೇಲೆ ಮುಸ್ಲಿಂ ಎಂದು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬೇರೆಯವರ ಆಸ್ತಿ ತೆಗೆದುಕೊಳ್ಳಲು ನಾವು ಯಾರು? ರೈತರು ಅನ್ನದಾತರು, ನಾವು ಅವರ ಆಸ್ತಿ ಮುಟ್ಟೋದಕ್ಕೆ ಸಾಧ್ಯನಾ? ವಕ್ಫ್ ಆಸ್ತಿ 1.12 ಲಕ್ಷ ಎಕರೆ ಇದೆ. ನಮ್ಮ ಬಳಿ ದಾಖಲೆ ಇದೆ. ಮುಜರಾಯಿ ವಕ್ಫ್ ಎರಡೂ ಒಂದೇ ಆಗಿದೆ. ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ ಎಂದು ಹೇಳಿದರು.

   ಬಿಜೆಪಿಯವರು ಈ ತರಹ ರಾಜಕಾರಣ ಮಾಡಬಾರದು. ರಾಜಕೀಯಕ್ಕೆ ಬಂದು ಜಾತಿ ಮಾಡಿದ್ರೆ ಅವರು ನಾಲಾಯಕ್. ನಾವು ಜಾತಿ ನೋಡಿದ್ರೆ ನಿರ್ನಾಮ ಆಗುತ್ತೇವೆ. ಬಿಜೆಪಿಯವರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ಅದಕ್ಕೆ ದಾಖಲೆ ಕೊಡುತ್ತೇನೆ. ಇದಕ್ಕೆ ಮಾನ್ಯ ಯತ್ನಾಳ್ ಏನು ಹೇಳುತ್ತಾರೆ? ಮುಜರಾಯಿ ಇಲಾಖೆ ಆಸ್ತಿ ಕೂಡಾ ಒತ್ತುವರಿ ಆಗಿದೆ. ಅದನ್ನು ಉಳಿಸೋಣ ನಡೀರಿ. ನನಗೆ ಹಿಂದೂ ಬ್ರದರ್ಸ್ ಮತ ಕೊಟ್ಟಿದ್ದಾರೆ. ನನಗೆ ಎಲ್ಲ ಸಮಾಜ ಒಂದೇ. ಎಲ್ಲ ಸಮಾಜವನ್ನು ಜೊತೆಗೆ ತೆಗೆದುಕೊಂಡು ಹೋಗುವವರೇ ರಾಜಕಾರಣಿ ಎಂದರು.

Recent Articles

spot_img

Related Stories

Share via
Copy link
Powered by Social Snap