ವಿದ್ಯಾರ್ಥಿಗಳಲ್ಲಿ ಪಂಚ ಲಕ್ಷಣಗಳಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ

ತುಮಕೂರು:

    ಎಜುಕ್ಯಾನ್-2021 ಸಮಾರೋಪದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನುಡಿ

ಅಧ್ಯಯನ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಂಚಲಕ್ಷಣಗಳನ್ನು ಅಳವಡಿಸಿಕೊಂಡಿದ್ದೆಯಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕಾಗಿನೆಲೆ ಕನಕ ಗುರುಪೀಠದ ಅಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಶ್ರೀಕನಕಶ್ರೀ ಸೇವಾ ಸಮಿತಿಯು ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನ.22 ರಿಂದ ನ.26 ವರೆಗೆ 5 ದಿನಗಳ ಕಾಲ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಯುವ ಜನರಿಗೆ ಐಎಎಸ್, ಕೆಎಎಸ್ ಹಾಗೂ ಇನ್ನಿತರೆ ಪರೀಕ್ಷೆಗಳಿಗೆ ತರಬೇತಿ ನೀಡುವ ಎಜುಕ್ಯಾನ್-2021 ಕಾರ್ಯಾಗಾರದ ಶುಕ್ರವಾರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಸ್ಪರ್ಧಾರ್ಥಿಗಳಿಗೆ ಆಶೀರ್ವಚನ ನೀಡುತ್ತ ಮಾತನಾಡುತ್ತಿದ್ದರು.


ಸಂಸ್ಕøತದಲ್ಲಿ “ಕಾಕ ಚೇಷ್ಟ, ಬಕೋ ಧ್ಯಾನಂ, ಶ್ವಾನ ನಿದ್ರಾ ತಥೈವಚ, ಅಲ್ಪಾಹಾರಿ, ಗೃಹತ್ಯಾಗಿ ವಿದ್ಯಾರ್ಥಿ ಪಂಚಲಕ್ಷಣಂ” ಎಂಬ ಸುಭಾಷಿತ ಶ್ಲೋಕವೊಂದಿದೆ. ಅಂದರೇ ಕಾಗೆಯ ಹಂಚಿ ತಿನ್ನುವ ಗುಣ, ಬಕ ಪಕ್ಷಿಯ ಧ್ಯಾನಸ್ಥ ಏಕಾಗ್ರತೆ, ನಿದ್ದೆಯಲ್ಲೂ ಎಚ್ಚರದಿಂದಿರುವ ನಾಯಿಯ ಗುಣ, ಮಿತ ಆಹಾರ ಸೇವನೆ, ಮನೆ ಬಿಟ್ಟು ಓದಲು ಹೋಗುವುದು ಈ ಐದು ಲಕ್ಷಣಗಳನ್ನು ಸ್ಪರ್ಧಾರ್ಥಿಗಳು ಅಳವಡಿಸಿಕೊಂಡರೆ ಐಎಎಸ್, ಕೆಎಎಸ್‍ನಂತಹ ಉನ್ನತ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂಬಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ವಿದ್ಯಾರ್ಹತೆಗಿಂತ ಸಾಮಾನ್ಯಜ್ಞಾನ ಮುಖ್ಯವಾಗಿರುತ್ತದೆ ಅದನ್ನು ಬೆಳೆಸಿಕೊಳ್ಳಿ ಎಂದು ಸ್ಪರ್ಧಾರ್ಥಿಗಳಿಗೆ ಕಿವಿಮಾತು ಹೇಳಿದರು.

            ಆಳ ಅಧ್ಯಯನ, ಅವಲೋಕನವಿರಲಿ :

ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ ಅವರು ಮಾತನಾಡಿ, ಸ್ಪರ್ಧಾರ್ಥಿಗಳು ಕೀಳರಿಮೆ ಬಿಟ್ಟು ಮುನ್ನಡೆದರೆ ಯಶಸ್ಸು ಹಿಂಬಾಲಿಸಿ ಬರುತ್ತದೆ. ಪ್ರಸ್ತುತ ಯುವಜನರು ಭಾಷಾಫ್ರೌಡಿಮೆ, ಶುದ್ಧ ಸಂವಹನ, ಬರವಣಿಗೆ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲಾದರೂ ಮುನ್ನಡೆ ಸಾಧಿಸಬಹುದು. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕೆಂದರೆ ಸ್ಪರ್ಧಾರ್ಥಿ ಎಲ್ಲಾ ಆಯಾಮಗಳಲ್ಲೂ ಬಲಿಷ್ಠನಾಗಿರಬೇಕು. ಪರೀಕ್ಷೆ ಆಯೋಜಿಸುವವರು ನಿಮ್ಮಿಂದ ಇವುಗಳನ್ನೆ ನೀರಿಕ್ಷಿಸುತ್ತಾರೆ. ಆದ್ದರಿಂದ ಈ ವಿಷಯಗಳನ್ನು ಅರಿತು ಸಮಗ್ರವಾಗಿ ಅಧ್ಯಯನ ಮಾಡಬೇಕು. ಎಲ್ಲರಲ್ಲೂ ಪ್ರತಿಭೆ ಇರುತ್ತದೆ ಆದರೇ ಅದನ್ನು ಅನಾವರಣ ಮಾಡುವ ರೀತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಯಾವುದೇ ಪರೀಕ್ಷೆಗೆ ತಯಾರಿ ನಡೆಸುವ ಮುನ್ನ ಆ ಪರೀಕ್ಷೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕು ಇಲ್ಲದಿದ್ದರೆ ಅಭಿಮನ್ಯು ಚಕ್ರವ್ಯೂಹ ಬೇಧಿಸಿದಂತಾಗುತ್ತದೆ. ಆದ್ದರಿಂದ ಉತ್ತಮ ಭಾಷಾ ಅಭಿವ್ಯಕ್ತಿ, ಆಳವಾದ ಅಧ್ಯಯನ, ಅವಲೋಕನದಿಂದ ಪರೀಕ್ಷೆ ಸುಲಭವಾಗುತ್ತದೆ ಎಂದು ಸ್ಪರ್ಧಾರ್ಥಿಗಳಿಗೆ ಪರೀಕ್ಷಾ ಆಯಾಮಗಳ ಬಗ್ಗೆ ತಿಳಿಸಿದರು.

ರಾಜಕಾರಣಿಗೆ 5 ವರ್ಷ, ಅಧಿಕಾರಿಗೆ 30 ವರ್ಷ :

ಮಾಜಿ ಸಚಿವರಾದ ಎಚ್.ಎಂ.ರೇವಣ್ಣನವರು ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಪತ್ರಿಕಾಂಗದ ಜೊತೆಗೆ ಆಡಳಿತಾಂಗವು ಅತ್ಯಂತ ಪ್ರಮುಖವಾದುದು. ಸರ್ಕಾರದ ನೀತಿ-ನಿರೂಪಣೆಗಳು ಹಾಗೂ ಯೋಜನೆಗಳನ್ನು ಅನುಷ್ಟಾನ ಮಾಡುವ ಜವಾಬ್ದಾರಿ ಆಡಳಿತಗಾರರಿಗಿರುತ್ತದೆ ಆದ್ದರಿಂದ ಸ್ಪರ್ಧಾರ್ಥಿಗಳು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ನಡೆಸಿ, ರಾಜಕಾರಣಿಗಳಿಗೆ ಕೇವಲ 5 ವರ್ಷ ಮಾತ್ರ ಅಧಿಕಾರವಿರುತ್ತದೆ ಆದರೇ ಅಧಿಕಾರಿಗಳಿಗೆ ಕನಿಷ್ಟ 30 ವರ್ಷ ಅಧಿಕಾರ ಸಿಗುತ್ತದೆ. ಒಂದು ಸಲ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿದರೆ ನಿವೃತ್ತಿಯಾಗುವವರೆಗೂ ಜನಸೇವೆ ಮಾಡಬಹುದು ಇದನ್ನು ಅರಿತು ಓದಿನಲ್ಲಿ ತನ್ಮಯರಾಗಿ ಎಂದು ಸ್ಪರ್ಧಾರ್ಥಿಗಳಿಗೆ ಹುರುಪು ತುಂಬಿದರು.

ಪ್ರಾಥಮಿಕ ಶಾಲಾ ಹಂತದ ಮಕ್ಕಳಿಗೆ ಬುನಾದಿ ಶಿಕ್ಷಣ :

ಸುವರ್ಣಮುಖಿ ಸಂಸ್ಕøತಿಧಾಮದ ಸಂಸ್ಥಾಪಕರಾದ ಆಚಾರ್ಯ ಡಾ.ಎಂ.ನಾಗರಾಜು ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಆದರೇ ಹಿಂದುಳಿದ ವರ್ಗಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿದೆಯೆ ಎಂಬ ಅಂಶವನ್ನು ನಾವುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದಕ್ಷಿಣ ಕರ್ನಾಟಕ ಹೇಗೊ ಪರವಾಗಿಲ್ಲ, ಆದರೇ ಉತ್ತರ ಕರ್ನಾಟಕದ ಭಾಗಗಳಲ್ಲಿ ಕುರಿಗಾರರ ಬದುಕು ಅಂತಂತ್ರವಾಗಿದೆ. ಅಲ್ಲಿನ ಯುವ ಜನರು ಇವತ್ತಿಗೂ ಹೆಬ್ಬೆಟ್ಟು ಒತ್ತುವ ಸ್ಥಿತಿಯಲ್ಲಿದ್ದಾರೆ. ಇತ್ತಿಚ್ಛಿನ ಅತಿವೃಷ್ಟಿಯಿಂದಾಗಿ ಬಹಳಷ್ಟು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಅವರನ್ನು ಮೇಲೆತ್ತುವ, ಶಿಕ್ಷಣ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ. ಅಮೆರಿಕದಲ್ಲಿ ಕಾನ ಎನ್ನುವ ಸಂಘಟನೆಯೊಂದನ್ನು ಕಟ್ಟಿದ್ದು, ಹಿಂದುಳಿದವರ ಏಳಿಗೆಗೆ ಶ್ರಮಿಸುತ್ತಿದ್ದೇವೆ. ಹಿಂದುಳಿದವರನ್ನು ಪರಿಪೂರ್ಣವಾಗಿ ಮೇಲೆತ್ತಲು ಇರುವ ಏಕೈಕ ಅಸ್ತ್ರವೆಂದರೆ ಅದು ಶಿಕ್ಷಣ ಮಾತ್ರ. ಹಾಗಾಗಿ ನಮ್ಮ ಗ್ರಾಮೀಣ ಯುವ ಜನರನ್ನು ಬಳಸಿಕೊಂಡು, ಹಿಂದುಳಿದ ಪ್ರಾಥಮಿಕ ಶಾಲಾ ಹಂತದ ಮಕ್ಕಳಿಗೆ ಸಂಸ್ಕಾರಯುತ ಬುನಾದಿ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.

 

ಸ್ವಂತ ಆಲೋಚನಾ ಸಾಮಥ್ರ್ಯದಿಂದ ಯಶಸ್ಸು :

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡ ಸ್ಪರ್ಧಾರ್ಥಿಗಳು ಮುಂದೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಿ ಎಂದು ಹಾರೈಸಿ ಮಾತನಾಡುತ್ತ, ಐಐಟಿ, ಐಐಎಸ್‍ಸಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತರುವ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಷ್ಟವಾಗಿದೆ. ಆದ್ದರಿಂದ ಒಂದು ವಿಚಾರದ ಬಗ್ಗೆ ಸ್ಪಷ್ಟ ಆಲೋಚನೆ ಮತ್ತು ಅಭಿಪ್ರಾಯ ಹೊಂದಬೇಕು, ಇಲ್ಲದಿದ್ದರೇ ನೀವು ಅಧಿಕಾರಿಗಳಾದರೂ ನಿಮ್ಮ ಮೇಲಿನ ಬಾಸ್‍ಗಳು ಹೇಳಿದಂತೆ ಕೇಳಬೇಕಾಗುತ್ತದೆ. ಶ್ರೀದೇವಿ ಸಂಸ್ಥೆಯು ಶ್ರೀಕನಕಶ್ರೀ ಸೇವಾ ಸಮಿತಿಯ ಜೊತೆ ಕೈ ಜೋಡಿಸಿ, ಹಿಂದುಳಿದ ವರ್ಗಗಗಳ ಯುವಜನರ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಭಾಗವಾಗಿ, ಈ ಒಂದು ಸೇವೆ ಮಾಡಿದ್ದೇವೆ. ಸತತ ಪ್ರಯತ್ನ, ಗುರಿ, ಶ್ರಮ, ಆಳವಾದ ಅಧ್ಯಯನದಿಂದ ವಿದ್ಯಾರ್ಥಿಗಳು ಓದಿ ಉನ್ನತ ಹುದ್ದೆ ಗಳಿಸಿರಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಡಾ.ಹುಲಿನಾಯ್ಕರ್ ಮತ್ತು ಡಾ.ರಮಣ್‍ಹುಲಿನಾಯ್ಕರ್ ಅವರನ್ನು ಶ್ರೀಕನಕಶ್ರೀ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಪರ್ಧಾರ್ಥಿಗಳು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸ್ಪರ್ಧಾರ್ಥಿಗಳು ಕಾರ್ಯಾಗಾರ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆಯಾಗಿ ಶ್ರೀದೇವಿ ಶಿಕ್ಷಣ ಸಂಸ್ಥೆಯಿಂದ ಶ್ರೀರಮಣಮಹರ್ಷಿ ಜೀವನ ಚರಿತ್ರೆ ಪುಸ್ತಕವನ್ನು ವಿತರಿಸಲಾಯಿತು. ಇದೇ ವೇಳೆ ಕಾರ್ಯಾಗಾರ ಯಶಸ್ಸಿಗೆ ಶ್ರಮಿಸಿದ ಹಸಿರುದಳದ ಮೋಹನ್ ತಂಡದ ಸ್ವಯಂ ಸೇವಕರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಈರಪ್ಪ ಎಸ್ ವಾಲೇಕಾರ್ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ.ಪರಶುರಾಮ್ ಸ್ವಾಗತಿಸಿದರು. ಶ್ರೀಕನಕಶ್ರೀ ಸೇವಾ ಸಮಿತಿ ನಡೆದು ಬಂದ ದಾರಿಯ ಬಗ್ಗೆ ಪ್ರಜಾಪ್ರಗತಿ ಪಿಆರ್‍ಓ ರೇಣುಕಾಪ್ರಸಾದ್ ವಿವರಿಸಿದರು. 5 ದಿನಗಳ ಕಾರ್ಯಾಗಾರದ ವರದಿಯನ್ನು ಪ್ರಾಧ್ಯಾಪಕ ಡಾ.ಯೋಗೀಶ್ ಮಂಡಿಸಿದರು. ಶಿಕ್ಷಕಿ ಕುಮುದ ನಿರೂಪಿಸಿದರು. ಕಾರ್ಯಕ್ರಮದ ಅಂತಿಮಘಟ್ಟವಾದ ವಂದನಾರ್ಪಣೆ ಮಾಡಿದ ಟಿ.ಎನ್.ಮಧುಕರ್ ಅವರು ಶಿಬಿರದ ಯಶಸ್ಸಿಗೆ ಕೈ ಜೋಡಿಸಿದ ಸರ್ವರನ್ನೂ ಅಭಿನಂದಿಸಿದರು. ವಿಶೇಷವಾಗಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರನ್ನು ಸ್ಮರಿಸಿ ಕೃತಜ್ಞತೆಗಳನ್ನು ಅರ್ಪಿಸಿದರು.

 

ಶ್ರೀಕನಕಶ್ರೀ ಸೇವಾ ಸಮಿತಿಯ ಕಾರ್ಯಕ್ಕೆ ಶ್ಲಾಘನೆ :

ಶ್ರೀಕನಕಶ್ರೀ ಸೇವಾ ಸಮಿತಿಯವರು 5 ದಿನಗಳÀ ಈ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿ ರಾಜ್ಯದ 25 ಜಿಲ್ಲೆಗಳ ಹಿಂದುಳಿದ, ಬಡ ಯುವ ಜನರಿಗೆ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕೆಂಬುದನ್ನು ಉತ್ಕøಷ್ಟ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಿದ್ದಾರೆ. ಸಮಾಜವು ಮಾಡಬೇಕಾಗಿದ್ದ ಕೆಲಸವನ್ನು ಶ್ರೀಕನಕಶ್ರೀ ಸೇವಾ ಸಮಿತಿಯವರು ಮಾಡಿದ್ದು, ಅವರಿಗೆ ಶ್ರೀಕನಕ ಗುರುಪೀಠದ ಪರವಾಗಿ ಅಭಿನಂದಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಸಮಿತಿಯವರ ಎಲ್ಲಾ ಸೇವಾ ಕಾರ್ಯಗಳಿಗೂ ಕನಕಗುರು ಪೀಠವು ಬೆನ್ನೆಲುಬಾಗಿ ನಿಲ್ಲಲಿದೆ.

-ಶ್ರೀನಿರಂಜನಾನಂದಪುರಿ ಸ್ವಾಮೀಜಿಗಳು, ಪೀಠಾಧ್ಯಕ್ಷರು, ಕನಕಗುರುಪೀಠ, ಕಾಗಿನೆಲೆ ಮಹಾಸಂಸ್ಥಾನ

ದೆಹಲಿಯಲ್ಲಿ ಶೀಘ್ರ ಸ್ಫರ್ಧಾತ್ಮಕ ಕೇಂದ್ರ :

ದೆಹಲಿಯ ಶೆಫರ್ಡ್ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ದೆಹಲಿಯಲ್ಲಿ 1 ಕಡೆ ಹಾಗೂ ಬಳಗಾವಿ ಮತ್ತು ಶಂಕರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 2 ಕಡೆ ಶೀಘ್ರ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಇಂತಹದ್ದೊಂದು ಅತ್ಯುತ್ತಮ ಕಾರ್ಯಾಗಾರವನ್ನು ರಾಜ್ಯದಲ್ಲೆ ಪ್ರಥಮ ಬಾರಿಗೆ ಮಾದರಿ ಉಚಿತ ವಸತಿಯುತ ಶಿಬಿರ ಆಯೋಜಿಸಿದ್ದಕ್ಕಾಗಿ ಶ್ರೀಕನಕಶ್ರೀ ಸೇವಾ ಸಮಿತಿಯವರಿಗೆ ರಾಜ್ಯದ ಹಿಂದುಳಿದ ವರ್ಗಗಳ ಪರವಾಗಿ ಅಭಿನಂದಿಸುತ್ತೇನೆ. ಸ್ಪರ್ಧಾರ್ಥಿಗಳು ಸಮಿತಿಯವರ ಆಶಯವನ್ನು ಸಾರ್ಥಕಗೊಳಿಸುವಲ್ಲಿ ಶ್ರಮಿಸಬೇಕು.

-ಎಚ್.ಎಂ.ರೇವಣ್ಣ, ಮಾಜಿ ಸಚಿವರು


 ಎಜುಕ್ಯಾನ್-2021 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಹಾಗೂ ಗಣ್ಯರು

ಶ್ರೀಕನಕಶ್ರೀ ಸೇವಾ ಸಮಿತಿಯು ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಜುಕ್ಯಾನ್-2021 ಕಾರ್ಯಾಗಾರದ ಸಮಾರೋಪ  ಸಮಾರಂಭದ ಉದ್ಘಾಟನೆಯನ್ನು ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ, ಶ್ರೀದೇವಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಹುಲಿನಾಯ್ಕರ್, ಡಾ.ರಮಣಹುಲಿನಾಯ್ಕರ್, ಆಚಾರ್ಯ ಡಾ.ಎಂ.ನಾಗರಾಜು, ಟಿ.ಎನ್.ಮಧುಕರ್, ಡಾ.ಪರಶುರಾಮ್, ಡಾ.ಯೋಗೀಶ್, ಮಹಾಲಿಂಗೇಶ್, ರೇಣುಕಾಪ್ರಸಾದ್, ಚಿಕ್ಕಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕ್ಷೇತ್ರ ಕಾಗಿನೆಲೆ ಕನಕ ಗುರುಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರು ಪ್ರಜಾಪ್ರಗತಿ ಸಹ ಸಂಪಾದಕರಾದ ಟಿ.ಎನ್.ಮಧುಕರ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಕನಕಶ್ರೀ ಸೇವಾ ಸಮಿತಿಯ ಜಿ.ಜೆ.ಕಲ್ಲಪ್ಪ, ಪ್ರಾಧ್ಯಾಪಕರಾದ ಡಾ.ಕೆ.ಜಿ.ಪರಶುರಾಮ್, ಡಾ.ಯೋಗೀಶ್ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಆರ್.ಪಾತಣ್ಣ, ಮಾಜಿ ಸೈನಿಕರಾದ ರೇಣುಕಾಪ್ರಸಾದ್ ಶ್ರೀಗಳ ಆಶೀರ್ವಾದ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap