ಚಿಕ್ಕನಾಯಕನಹಳ್ಳಿ
ಪ್ರೌಢಾವಸ್ಥೆಯ ಮಕ್ಕಳಿಗೆ, ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನ ಹಾಗೂ ತಿಳಿವಳಿಕೆ ನೀಡಿ ಮುಂದೆ ಆಗುವಂತಹ ಅನಾಹುತಗಳನ್ನು ತಪ್ಪಿಸುವುದು ಕಾನೂನು ಸಾಕ್ಷರತಾ ರಥ ಸಂಚಾರದ ಉದ್ದೇಶ ಎಂದು ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್.ಡಿ.ವಡಿಗೇರಿ ತಿಳಿಸಿದರು.
ತಾಲ್ಲೂಕಿನ ಗೋಡೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಅರಿವು ನೆರವು ಸಂಚಾರಿ ಜನತಾ ನ್ಯಾಯಾಲಯದ ಮೊದಲನೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕೆಳಮಟ್ಟದವರು, ಮಹಿಳೆಯರು ಕಾನೂನಿನ ಸೌಲಭ್ಯ ದೊರಕದೆ ಪರದಾಡುತ್ತಿರುತ್ತಾರೆ. ಅಂತಹವರು, ನೇರವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಬಂದು ಅಫಿಡವಿಟ್ ನೀಡಿ ನನ್ನಲ್ಲಿ ಹಣಕಾಸಿನ ಶಕ್ತಿ ಇಲ್ಲ, ನಿಮ್ಮ ಸಮಿತಿ ವತಿಯಿಂದ ವಕೀಲರನ್ನು ನೇಮಕ ಮಾಡಿಕೊಡಿ ಎಂದು ಕೇಳಬಹುದು ಅಂತಹವರಿಗೆ ಉಚಿತ ಕಾನೂನಿನ ಸೌಲಭ್ಯವನ್ನು ತಾಲ್ಲೂಕು ಕಾನೂನು ಸೇವಾ ಸಮಿತಿ ನೀಡುತ್ತದೆ ಎಂದರು.
ಪ್ರತಿ ಹೋಬಳಿಗಳಲ್ಲಿ ಲೀಗಲ್ ಏಡ್ ಕ್ಲಿನಿಕ್ ಮಾಡಲಾಗಿದೆ. ಅಲ್ಲಿ ನಿಗದಿ ಮಾಡಿದ ದಿನದಂದು ವಕೀಲರು ಸಿಗುತ್ತಾರೆ. ಅಲ್ಲಿಯೂ ನೀವು ಸಮಸ್ಯೆ ಹೇಳಿಕೊಳ್ಳಬಹುದು. ಅದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ತಾಲ್ಲೂಕು ಸೇವಾ ಸಮಿತಿಗೆ ಕೈ ಜೋಡಿಸಿದೆ.
ಕೆಲವೊಂದು ಇಲಾಖೆಗಳಲ್ಲಿ ಸಮಸ್ಯೆ ಬಗೆಹರಿಸಿ ಎಂದು ಜನಸಾಮಾನ್ಯರು ಮನವಿ ಮಾಡಿ ಪ್ರಕರಣ ಇತ್ಯರ್ಥವಾಗಿರದಿದ್ದರೆ ತಾಲ್ಲೂಕು ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿ, ಸಮಿತಿ ಏಕೆ ವಿಳಂಬವಾಗಿದೆ ಎಂದು ಪ್ರಶ್ನೆ ಮಾಡುತ್ತದೆ ಎಂದ ಅವರು, ಕಾನೂನು ಸೇವಾ ಸಮಿತಿಯಲ್ಲಿ 13 ವರ್ಷಗಳಿಂದ ಸಂಚಾರಿ ಕಾನೂನು ರಥ ಸಂಚರಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಐದಾರು ರಥಗಳಿವೆ. ಆ ರಥಗಳು ಪ್ರತಿ ತಾಲ್ಲೂಕಿಗೆ ವರ್ಷಕ್ಕೆ ಎರಡು ಬಾರಿ ಬರುತ್ತವೆ. ದಿನಕ್ಕೆ ಮೂರು ಜಾಗದಲ್ಲಿ ಅರಿವು ಕಾರ್ಯಕ್ರಮ, ಅದೇ ರೀತಿ ತಾಲ್ಲೂಕಿನಲ್ಲಿ ಸಂಚಾರಿ ರಥದ ಕಾರ್ಯಕ್ರಮಗಳು ನಾಲ್ಕು ದಿನ ನಡೆಯುತ್ತವೆ ಎಂದರು.ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ನಾಗರಾಜು, ಶಾಲಾ ಮುಖ್ಯೋಪಾಧ್ಯಾಯ ಜಯಣ್ಣ, ಬಿಇಓ ಕಾತ್ಯಾಯಿನಿ, ಸಿಡಿಪಿಓ ತಿಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪಟ್ಟಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ:
ಗೋಡೆಕೆರೆಯಲ್ಲಿ ನಡೆದ ಮೊದಲ ಅಧಿವೇಶನಕ್ಕೂ ಮೊದಲು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಕಿರಣ್ ಕುಮಾರ್.ಡಿ.ವಡಿಗೇರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ, ಜನಸಾಮಾನ್ಯ ರಿಗೆ ಕಾನೂನಿನ ಬಗ್ಗೆ ತಿಳಿವಳಿಕೆ ಹಾಗೂ ಅವರಲ್ಲಿ ಅರಿವು ಮೂಡಿಸಲು ಜನತಾ ನ್ಯಾಯಾಲಯದ ವಾಹನವು ನಾಲ್ಕು ದಿನ ತಾಲ್ಲೂಕಿನಾದ್ಯಂತ ಸಂಚರಿಲಿದೆ. ರಥದ ಜೊತೆಯಲ್ಲಿ ನುರಿತ ವಕೀಲರು, ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥರು ಕಾನೂನು ಸಾಕ್ಷರತಾ ರಥ ಸಂಚಾರದ ಜೊತೆ ಹಳ್ಳಿಗಳಿಗೆ ಹೋಗಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಎಂ.ಪ್ರಮೀಳಾ, ಕೆ.ತೆಂಡ್ರಲ್, ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ನಾಗರಾಜು, ಬಿಇಓ ಕಾತ್ಯಾಯಿನಿ, ವಕೀಲ ಕೆ.ಆರ್.ಚನ್ನಬಸವಯ್ಯ, ಸಿಡಿಪಿಓ ತಿಪ್ಪಯ್ಯ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
