ಬೆಂಗಳೂರು:
ಸಾರಿಗೆ ವಾಹನಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ನಿಯಮವು ವಾಹನಗಳ ಮಾಲೀಕರಲ್ಲಿ ಗೊಂದಲವನ್ನುಂಟು ಮಾಡಿದೆ.
ಕೆಲವು ಮಾಲೀಕರು ಜಿಪಿಎಸ್ ಸಾಧನಗಳ ಬೆಲೆಯು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿದೆ ಎಂದು ಹೇಳಿದರೆ, ಬಸ್ ಮತ್ತು ವ್ಯಾನ್ ನಿರ್ವಾಹಕರು ಎಷ್ಟು ಪ್ಯಾನಿಕ್ ಬಟನ್‌ಗಳು ಮತ್ತು ಜಿಪಿಎಸ್ ಸಾಧನಗಳನ್ನು ಅಳವಡಿಸಬೇಕೆಂದು ತಿಳಿಯುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಕಳೆದ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಎಲ್ಲೋ ಬೋರ್ಡ್ ಕ್ಯಾಬ್‌ಗಳು, ವ್ಯಾನ್‌ಗಳು ಮತ್ತು ಪ್ರವಾಸಿ ಬಸ್‌ಗಳಂತಹ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳು ಈ ನವೆಂಬರ್‌ನೊಳಗೆ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಸಾಧನಗಳನ್ನು ಅಳವಡಿಸಬೇಕಿದೆ. ಪ್ರಯಾಣಿಕರು ಅದರಲ್ಲೂ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ನಿಯಮ ಅನುಸರಿಸಲು ವಿಫಲರಾದ ಮಾಲೀಕರಿಗೆ ವಾಹನ ಪರವಾನಗಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನವೀಕರಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಮಾರುಕಟ್ಟೆಯಲ್ಲಿ ಜಿಪಿಎಸ್ ಸಾಧನ ಮತ್ತು ಪ್ಯಾನಿಕ್ ಬಟನ್ ಕಿಟ್‌ನ ಬೆಲೆ ಸುಮಾರು 4,000 ರೂಪಾಯಿ ಇದೆ. ಆದರೆ, ಸಾರಿಗೆ ಇಲಾಖೆಯ ಮಾರಾಟಗಾರರು ಜಿಎಸ್‌ಟಿ ಹೊರತುಪಡಿಸಿ 7,599 ರೂಗೆ ನೀಡುತ್ತಿದ್ದಾರೆಂದು ಖಾಸಗಿ ಕ್ಯಾಬ್ ಮಾಲೀಕರೊಬ್ಬರು ಹೇಳಿದ್ದಾರೆ.
ಸಾಧನವನ್ನು ಸ್ಥಾಪಿಸುವುದು ಸಮಸ್ಯೆಯಲ್ಲ, ಆದರೆ, ಸಾರಿಗೆ ಇಲಾಖೆ ವತಿಯಿಂದ ಮಾರಾಟ ಮಾಡವವರಿಂದ ಮಾತ್ರ ಖರೀದಿ ಮಾಡಬೇಕೆಂಬ ಒತ್ತಾಯ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಕ್ಯಾಬ್ ನಿರ್ವಾಹಕರ ಸಂಘದ ಪ್ರತಿನಿಧಿಯೊಬ್ಬರು ಮಾತನಾಡಿ, ಟೂರಿಸ್ಟ್ ವ್ಯಾನ್‌ಗಳು ಮತ್ತು ಬಸ್‌ಗಳಂತಹ ವಾಹನಗಳಿಗೆ ಎಷ್ಟು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಬೇಕು ಎಂಬುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ವಾಹನಗಳನ್ನು ಟ್ರ್ಯಾಕ್ ಮಾಡುವುದು ಇದರ ಮುಖ್ಯ ಉದ್ದೇಶವಾಗಿದ್ದು, ಯಾವುದೇ ಪ್ರಯಾಣಿಕರು ಪ್ಯಾನಿಕ್ ಬಟನ್ ಅನ್ನು ಒತ್ತಿದರೆ, ಕೂಡಲೇ ಅವರ ನೆರವಿಗೆ ಧಾವಿಸಬೇಕು. ಈ ಬಟನ್ ಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.
ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಸಿ ಮಾತನಾಡಿ, ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಸಾಧನ ಪೂರೈಸಲು 13 ಕಂಪನಿಗಳ ಮಾರಾಟಗಾರರಿದ್ದಾರೆ. ವಾಹನ ಮಾಲೀಕರು ಈ ಮಾರಾಟಗಾರರಿಂದ ಸಾಧನಗಳನ್ನು ಖರೀದಿಸಬಹುದು. ಸಾರಿಗೆ ಇಲಾಖೆಗೂ ಬೆಲೆ ನಿಗದಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಆದಷ್ಟು ಬೇಗ ಸಾಧನಗಳನ್ನು ಅಳವಡಿಸಲು ವಾಹನ ಮಾಲೀಕರಿಗೆ ತಿಳಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಇಲಾಖೆಯು ಅದರ ಬಗ್ಗೆ ಜಾಗೃತಿ ಮೂಡಿಸಿ ವಾಹನ ಮಾಲೀಕರ ಮನವೊಲಿಸಿ ನವೆಂಬರ್ ಒಳಗೆ ಸಾಧನಗಳನ್ನು ಅಳವಡಿಸಿಕೊಳ್ಳುವಂತೆ ಮಾಡುತ್ತದೆ ಎಂದೂ ತಿಳಿಸಿದ್ದಾರೆ.