ಪಾವಗಡ:
ತಾಲ್ಲೂಕಿನಲ್ಲಿ ಕೊರೊನಾ 3 ನೆ ಅಲೆ ತೀವ್ರಗೊಂಡಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಹ ಸಾರ್ವನಿಕರು ಮಾತ್ರ ಬುದ್ದಿ ಇಲ್ಲದಂತೆ ವರ್ತನೆ ಮಾಡುತ್ತಿರುವುದು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂಬುದು ಬುದ್ದಿ ಜೀವಿಗಳ ಮಾತಾಗಿದೆ.
ಸರ್ಕಾರ ಒಂದು ತಿಂಗಳಿನಿಂದಲೆ ಕೊರೊನಾ ಮತ್ತು ಓಮೈಕ್ರಾನ್ ಹಾವಳಿ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಆರೋಗ್ಯ ಇಲಾಖೆ ಹಂತ ಹಂತವಾಗಿ ಮುನ್ನೆಚ್ಚರಿಕೆ ವಹಿಸಿ ಹರಡದಂತೆ ಸಾರ್ವನಿಕರನ್ನು ಎಚ್ಚರಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೂ ಇದು ಫಲಕಾರಿಯಾಗದೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಲಕ್ಷಗಟ್ಟಲೆ ಮಂದಿ ಪ್ರತಿ ದಿನ ಸೇರುತ್ತಿದ್ದು, ಕೊರೊನಾ ವೈರಸ್ ಬಗ್ಗೆ ಅರಿವೆ ಇಲ್ಲಂದಂತೆ ವೈಯಕ್ತಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಪುರಸಭೆ ಮತ್ತು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಸೋಂಕು ಕಡಿಮೆ ಸಂಖ್ಯೆಯಲ್ಲಿ ಇದ್ದಾಗ ಮುನ್ನೆಚ್ಚರಿಕೆ ವಹಿಸಿದರೆ ಮುಂದೆ ನಡೆಯುವ ಅನಾಹುತಗಳನ್ನು ತಪ್ಪಿಸಬಹುದು ಎಂದು ನಾಗಲಮಡಿಕೆ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಶಾಂತಿ ಪದವಿ ಪೂರ್ವ ಖಾಸಗಿ ಕಾಲೇಜ್ ಆಡಳಿತ ಮುಂಜಾಗ್ರತೆ ಕೈಗೊಳ್ಳದ ಕಾರಣ 22 ವಿದ್ಯಾರ್ಥಿಗಳಿಗೆ ಸೋಂಕು ದೃಢÀ ಪಟ್ಟಿದೆ. ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ ನಂತರವಾದರೂ ತಾಲ್ಲೂಕು ಆಡಳಿತ ಎಚ್ಚರಿಕೆ ವಹಿಸಿ, ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದ್ದರೆ ಪೋಷಕರೊಂದಿಗೆ ಮತ್ತು ತಮ್ಮ ಸ್ನೇಹಿತರೊಂದಿಗೆ ಅಂತರ ಕಾಯ್ದುಕೊಳ್ಳಬಹುದಿತ್ತು. ಇಲ್ಲಿನ ಅಧಿಕಾರಿಗಳು ಇದನ್ನು ಮಾಡಿಲ್ಲ ಎಂದು ಮಲ್ಲಿಕಾರ್ಜುನ ಆರೋಪಿಸಿದ್ದಾರೆ.
ಶಾಂತಿ ಪದವಿ ಪೂರ್ವ ಕಾಲೇಜ್‍ನಲ್ಲಿ 22 ವಿದ್ಯಾರ್ಥಿಗಳಿಗೆ ಕೋವಿಡ್ ದೃಢÀಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಪದವಿ ಪೂರ್ವ ಕಾಲೇಜ್‍ನ್ನು ಲಾಕ್ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಶಾಲಾ-ಕಾಲೇಜು ಮುಚ್ಚಲು ಅವಕಾಶ ಕೊಡಬೇಡಿ
ಮೂರು ತಿಂಗಳ ಹಿಂದಷ್ಟೆ ಶಾಲಾ ಕಾಲೇಜ್‍ಗಳನ್ನು ತೆರೆದು, ಪಾಠ ಪ್ರವಚನಗಳು ನಡೆಸುವಷ್ಟರಲ್ಲಿ, ಮೂರನೆ ಮಹಾಮಾರಿ ಕೊರೋನಾ ವೈರಸ್‍ನಿಂದ ಮತ್ತೆ ವಿದ್ಯಾರ್ಥಿಗಳಿಗೆ ನೆಮ್ಮದಿ ಇಲ್ಲದಂತೆ ಕಾಡುತ್ತಿದೆ. ಶಾಲಾ ಕಾಲೇಜಿನ ಆಡಳಿತ ವರ್ಗದವರು ಕಟ್ಟುನಿಟ್ಟಾಗಿ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಿ, ಕೋವಿಡ್ ನಿಯಮಗಳನ್ನು ಪಾಲಿಸಲು ಸೂಚನೆ ನೀಡಬೇಕಾಗಿದೆ ಎಂಬುದು ಪೋಷಕರ ಅಭಿಪ್ರಾಯವಾಗಿದೆ.
ಎರಡು ವರ್ಷಗಳಿಂದ ಮಕ್ಕಳು ಮನೆಯಲ್ಲಿ ಕುಳಿತು ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸವಾಗದೆ ಮುಂದಿನ ಜೀವನ ಕಷ್ಟಕರವಾಗಬಹುದು. ಸೋಂಕಿತರ ಸಂಖ್ಯೆ ಹೆಚ್ಚಾದರೆ ಮತ್ತೆ ಸರ್ಕಾರ ಶಾಲಾ ಕಾಲೇಜುಗಳನ್ನು ಲಾಕ್ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಕೋವಿಡ್ ತಡಗಟ್ಟುವುದು ನಮ್ಮೆಲ್ಲರ ಕೈಯಲ್ಲಿ ಇದೆ ಎಂಬ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿಯಬೇಕಾಗಿದೆ.
ತಾಲ್ಲೂಕು ಆಡಳಿತ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳದಿದ್ದರೆ ಕೊರೊನಾ 3 ನೆ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರನ್ನು ನೋಡಬೇಕಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಪಾವಗಡ ತಾಲ್ಲೂಕು ಆಂಧ್ರದ ಗಡಿ ಭಾಗದಲ್ಲಿ ಇರುವುದರಿಂದ ಗಡಿ ಭಾಗದ ಜನ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪಾವಗಡಕ್ಕೆ ಬಂದು ಹೋಗುತ್ತಿದ್ದಾರೆ. ಗಡಿಭಾಗದಲ್ಲಿ ಚೆಕ್ ಪೋಸ್ಟ್‍ಗಳನ್ನು ತೆರೆದು ಪೋಲೀಸ್ ಮತ್ತು ಗ್ರಾಪಂ ಅಧಿಕಾರಿಗಳನ್ನು ನೇಮಕ ಮಾಡಿದರೆ ಮುಂಜಾಗ್ರತೆಯಾಗಿ ಕೋವಿಡ್‍ನ್ನು ತಡೆಗಟ್ಟಬಹುದಾಗಿದೆ.
ಪಟ್ಟಣದ ಹೊಸ ಬಸ್‍ನಿಲ್ದಾಣದಲ್ಲಿ ಪ್ರತಿ ದಿನ ಬೆಳಗ್ಗೆ ಹೂವಿನ ಮಾರುಕಟ್ಟೆ ನಡೆಯುತ್ತದೆ. ಮಾರಾಟಗಾರರು ಮತ್ತು ವ್ಯಾಪಾರಸ್ಥರು ಅಂತರ ಕಾಪಾಡದೆ ಗುಂಪು ಗುಂಪಾಗಿ ವ್ಯವಹಾರ ನಡೆಸುತ್ತಿದ್ದಾರೆ. ಹೂವಿನ ಮಾರುಕಟ್ಟೆಗೆ ವಿವಿಧ ಜಿಲ್ಲೆ ಮತ್ತು ರಾಜಧಾನಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಬಂದು ಹೋಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ವ್ಯವಸ್ಥೆಯನ್ನು ಸರಿ ಪಡಿಸಲು ಪುರಸಭೆ ಆಡಳಿತ ಮುಂದಾಗಿ, ತಾಲ್ಲೂಕು ಆಡಳಿತ ಕೋವಿಡ್ ತಡೆಗಟ್ಟಲು ಎಚ್ಚರ ವಹಿಸಬೇಕಾಗಿದೆ.
ತಾಲ್ಲೂಕಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು, ಪ್ರತಿ ದಿನ ಗ್ರಾಮೀಣ ಮತ್ತು ಗಡಿ ಭಾಗದ ಜನತೆ ಲಕ್ಷಗಟ್ಟಲೆ ಪಟ್ಟಣಕ್ಕೆ ಬಂದು ಹೋಗುತ್ತಿದ್ದಾರೆ. ಓಡಾಡುವಾಗ ಯಾವುದೇ ಕೊರೊನಾ ವೈರಸ್ ತಡೆಗಟ್ಟುವ ಸೂಚನೆಗಳನ್ನು ಪಾಲಿಸದ ಕಾರಣ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ತಾಲ್ಲೂಕು ಆಡಳಿತ ತಲೆ ಕೆಡಿಸಿಕೊಳ್ಳದೆ ಕೈ ಕಟ್ಟಿ ಕುಳಿತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ ಶರವೇಗದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ತಡೆಗಟ್ಟಲು ತಾಲ್ಲೂಕಿನ ಎಲ್ಲಾ ಜನರು ಸಹಕಾರ ನೀಡಿ, ಮಾಸ್ಕ್ ಧರಿಸಿ, ವೈಯಕ್ತಿಕ ಅಂತರವನ್ನು ಕಾಪಾಡಿ ಪ್ರಾಣವನ್ನು ಉಳಿಸಿಕೊಳ್ಳಬೇಕಾಗಿದೆ.
– ಹೆಚ್.ರಾಮಾಂಜಿನಪ್ಪ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
