ಚೆನ್ನೈ:
ಎಸ್. ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದೆ. ಶಂಕರ್ ಅವರ ವೃತ್ತಿ ಜೀವನದಲ್ಲಿ ಸೋಲಿನ ಪಟ್ಟಿಯಲ್ಲಿ ಈ ಸಿನಿಮಾ ಸೇರಿಕೊಂಡಿದೆ. ಸಾಮಾನ್ಯವಾಗಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿದೆ ಎಂದಾಗ ಅದನ್ನು ಆದಷ್ಟು ಬೇಗ ಒಟಿಟಿಗೆ ತರಲಾಗುತ್ತದೆ. ಈಗ ‘ಇಂಡಿಯನ್ 2’ ವಿಚಾರದಲ್ಲಿ ಆಗಿರೋದು ಕೂಡ ಅದೇ. ಈ ಸಿನಿಮಾ ಶೀಘ್ರವೇ ನೆಟ್ಫ್ಲಿಕ್ಸ್ ಮೂಲಕ ಒಟಿಟಿಗೆ ಕಾಲಿಡುತ್ತಿದೆ. ಇದು ಕಮಲ್ ಹಾಸನ್ ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
‘ಇಂಡಿಯನ್’ ಸಿನಿಮಾ 1966ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕೆ ಶಂಕರ್ ಅವರು 28 ವರ್ಷಗಳ ಬಳಿಕ ಸೀಕ್ವೆಲ್ ತಂದರು. ‘ಇಂಡಿಯನ್ 2 ಸಿನಿಮಾ ಜುಲೈ 12ರಂದು ಬಿಡುಗಡೆ ಆಯಿತು. ಈಗ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳ ಒಳಗಾಗಿ ಒಟಿಟಿಗೆ ಬರುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ನೆಟ್ಫ್ಲಿಕ್ಸ್ ಕಡೆಯಿಂದ ಘೋಷಣೆ ಆಗಿದೆ. ತಮಿಳಿನ ಜೊತೆಗೆ, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಒಟಿಟಿಗೆ ರಿಲೀಸ್ ಆಗಲಿದೆ. ಈ ವಿಷಯ ನೋಡಿದ ಬಳಿಕ ಸಿನಿಮಾ ಯಾವ ದುಸ್ಥಿತಿಗೆ ತಲುಪಿತ್ತು ಅನ್ನೋದು ಪಕ್ಕಾ ಆಗಿದೆ.
ಈ ಸಿನಿಮಾದ ಅವಧಿ ಈ ಮೊದಲು 3 ಗಂಟೆ ಇತ್ತು. ಆ ಬಳಿಕ ಚಿತ್ರದ ಅವಧಿಗೆ ಎಲ್ಲರೂ ಟೀಕೆ ವ್ಯಕ್ಯಪಡಿಸಿದರು. ಹೀಗಾಗಿ ಸಿನಿಮಾದ ಅವಧಿಗೆ 20 ನಿಮಿಷ ಕತ್ತರಿ ಹಾಕಿ ಅದನ್ನು 2 ಗಂಟೆ 40 ನಿಮಿಷಕ್ಕೆ ಇಳಿಕೆ ಮಾಡಲಾಯಿತು. ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ಜೊತೆ ಸಿದ್ದಾರ್ಥ್, ಎಸ್ಜೆ ಸೂರ್ಯ, ಬಾಬಿ ಸಿಂಹ, ರಕುಲ್ ಪ್ರೀತ್ ಸಿಂಗ್ ಮೊದಲಾದವರು ನಟಿಸಿದ್ದಾರೆ.
ಈ ಚಿತ್ರದ ಕಥೆ ತುಂಬಾನೇ ಹಳೆಯ ಫಾರ್ಮ್ಯಾಟ್ ಹೊಂದಿದೆ. ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗಿ ಸೋತರೂ ಈ ಚಿತ್ರಕ್ಕೆ ಮೂರನೇ ಪಾರ್ಟ್ ಬರಲಿದೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಎರಡನೇ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನೋಡಿ ನಿರ್ಮಾಪಕರು ಮೂರನೇ ಪಾರ್ಟ್ ಮಾಡೋದು ಅನುಮಾನ ಎಂದೇ ಹೇಳಲಾಗುತ್ತಿದೆ.